ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆ ಹಾಗು ತಾಲೂಕ್ ಪಂಚಾಯತ್,ಗ್ರಾಮ ಪಂಚಾಯತ್‌ಗಳಲ್ಲಿ ತೆರವಾಗಿರುವ 299 ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣೆ ಆಯೊಗ, ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು ಡಿ. 17ರಂದು ಮತದಾನ ನಡೆಯಲಿದೆ.
ಸ್ಥಳೀಯ ಸಂಸ್ಥೆಗಳ ಪೈಕಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬೊಮ್ಮಸಂದ್ರ ಪುರಸಭೆಯ ವಾರ್ಡ್ ನ .16, ಕಡೂರು ಪುರಸಭೆಯ ವಾರ್ಡ್ ನ .14, ಇಂಡಿ ಪುರಸಭೆಯ ವಾರ್ಡ್ ನ.15 ಹಾಗು ವಾಡಿ ಪುರಸಭೆಯ ವಾರ್ಡ್ ನ. 1ಕ್ಕೆ ಉಪ ಚುನಾವಣೆ ನಡೆಯಲಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು ಬುದವಾರದಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ರಾಜ್ಯದ 29 ಜಿಲ್ಲೆಗಳ 207 ಗಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 287 ಸದಸ್ಯ ಸ್ಥಾನಗಳಿಗೆ ಹಾಗೂ ತಾಲೂಕು ಪಂಚಾಯಿತಿಯ ಎಂಟು ಸ್ಥಾನಗಳಿಗೆ ಡಿಸೆಂಬರ್ 17 ರಂದು ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಹೊರಡಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 20 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ನವೆಂಬರ್ 27 ರಿಂದ ನಾಮಪತ್ರಗಳ ಸಲ್ಲಿಕೆ ಆರಂಭವಾಗಿದ್ದು ನ.30 ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಡಿ 1 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಡಿ.4 ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನ. ಡಿ.17 ರಂದು ಚುನಾವಣೆ ನಡೆಯಲಿದೆ. ಡಿ.20 ಮತ ಎಣಿಕೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.