ಕಾಸರಗೋಡು: ಕಾಸರಗೋಡು ನಗರಸಭೆಯ 36ನೇ ಕಡಪ್ಪುರ ವಾರ್ಡ್‌ಗೆ ನಡೆಯಲಿರುವ ಉಪಚುನಾವಣೆ ಯಲ್ಲಿ ಜಿದ್ದಾ ಜಿದ್ದಿನ ತ್ರಿಕೋನ ಸ್ಪರ್ಧೆಯ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ.
ಈ ವಾರ್ಡ್‌ನ ಕೌನ್ಸಿಲರ್ ಆಗಿದ್ದ ಬಿಜೆಪಿಯ ಎಂ. ಪ್ರೇಮಾ ಅವರು ಅಸೌಖ್ಯ ನಿಮಿತ್ತ ಇತ್ತೀಚೆಗೆ ನಿಧನಹೊಂದಿದ್ದರು. ಇದರ ಹಿನ್ನೆಲೆಯಲ್ಲಿ ಜು.18ರಂದು ಈ ವಾರ್ಡ್‌ಗೆ ಉಪ ಚುನಾವಣೆ ನಡೆಯಲಿದೆ.
ಬಿಜೆಪಿಯ ಅಭ್ಯರ್ಥಿಯಾಗಿ ಕೆ. ಸರಳಾ, ಎಡರಂಗದ ಅಭ್ಯರ್ಥಿಯಾಗಿ ಜಿ. ಬಿಂದು ಮತ್ತು ಐಕ್ಯರಂಗದಿಂದ ಎಸ್.ರಹಾ° ಅವರನ್ನು ಕಣಕ್ಕಿಳಿಸಲಾಗಿದೆ. ಈ ಮೂರು ಪಕ್ಷಗಳ ಉಪ (ಡೆಮ್ಮಿ ) ಅಭ್ಯರ್ಥಿಗಳು ಸೋಮವಾರ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಅಂತಿಮವಾಗಿ ಈ ಮೂರು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ಈ ವಾರ್ಡ್‌ನಲ್ಲಿ ಒಟ್ಟು 1620 ಮಂದಿ ಮತದಾರರಿದ್ದಾರೆ. ಈ ಪೈಕಿ 861 ಪುರುಷರು ಮತ್ತು 759 ಮಹಿಳೆಯರಾಗಿದ್ದಾರೆ. ಕಾಸರಗೋಡು ಜಿಲ್ಲಾ ಉಸ್ತುವಾರಿ ಶಿಕ್ಷಣಾಧಿಕಾರಿ ಕೆ. ನಾಗವೇಣಿ ಞಯವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದು ಮಹಿಳಾ ಮೀಸಲು ವಾರ್ಡಾದ ಕಾರಣ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಒಟ್ಟು 1233 ಮತಗಳು ಚಲಾಯಿಸಲ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಪ್ರೇಮಾ ಅವರು 638ಮತಗಳನ್ನು ಪಡೆದುಕೊಂಡು 565ಮತಗಳನ್ನು ಪಡೆದಿದ್ದ ಯುಡಿಎಫ್‌ನ ಅಭ್ಯರ್ಥಿ ಬಿ.ಬೀನಾ ಅವರನ್ನು 73ಮತಗಳಿಂದ ಪರಾಜಯಗೊಳಿಸಿ ಗೆಲುವಿನ ನಗೆಯನ್ನು ಬೀರಿದ್ದರು. ಎಲ್‌ಡಿಎಫ್‌ನ ಪಿ.ನಾರಾಯಣಿ ಅವರಿಗೆ ಕೇವಲ 30ಮತಗಳು ಲಭಿಸಿದ್ದವು.
ಈ ಬಾರಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಶತಾಯ ಗತಾಯ ಯತ್ನಿಸುತ್ತಿದ್ದರೆ ಅದನ್ನು ಕಸಿದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ. ಇದಕ್ಕಾಗಿ ಕೆಲವೊಂದು ಕಸರತ್ತುಗಳನ್ನು ಕಾಂಗ್ರೆಸ್ ಆರಂಭಿಸಿದೆ. ನಗರ ಸಭೆಯಲ್ಲಿ ನಡೆದ ಹಲವು ಹಗರಣಗಳನ್ನು ಬಿಜೆಪಿಯು ಪ್ರಧಾನ ಆಯುಧವನ್ನಾಗಿ ಮಾಡಿಕೊಂಡಿದೆ. ಇದರ ಮಧ್ಯೆ ಎಲ್ಲಾ ಪಕ್ಷಗಳೂ ಗೆಲುವಿನ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿವೆ.