Advertisement

ಮೈತ್ರಿ ಕೂಟ ಭದ್ರ ಬಿಜೆಪಿಗೆ ಹೊಡೆತ

06:00 AM Nov 08, 2018 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾಲ್ಕರಲ್ಲಿ ಮೈತ್ರಿ ಪಕ್ಷಗಳು ಪ್ರಚಂಡ ಜಯಗಳಿಸುವುದರ ಮೂಲಕ ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿಗೆ ಬಿಗ್‌ ಶಾಕ್‌ ನೀಡಿವೆ. 


ರಾಮನಗರ, ಜಮಖಂಡಿ ವಿಧಾನಸಭೆ, ಬಳ್ಳಾರಿ, ಮಂಡ್ಯ ಲೋಕಸಭೆ ಕ್ಷೇತ್ರಗಳನ್ನು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ತನ್ನದಾಗಿಸಿಕೊಂಡಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಈ ಮೂಲಕ ರಾಜ್ಯದ ಸಮ್ಮಿಶ್ರ ಸರ್ಕಾರ ಮತ್ತಷ್ಟು ಗಟ್ಟಿಯಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸಲು ಈ ಉಪ ಚುನಾವಣೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ.  ಆದರೆ, ಪ್ರತಿಪಕ್ಷ ಬಿಜೆಪಿಗೆ ಫ‌ಲಿತಾಂಶ ತೀವ್ರ ಮುಖಭಂಗ ಹಾಗೂ ಹಿನ್ನಡೆ ತಂದಿದೆ. 

Advertisement

ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಅವರು 2,43, 161 ಮತಗಳ ಅಂತರದಿಂದ ಗೆದ್ದು 14 ವರ್ಷಗಳ ಬಿಜೆಪಿ ಭದ್ರಕೋಟೆ ಅಲುಗಾಡುವಂತೆ ಮಾಡಿದ್ದಾರೆ. ಶ್ರೀರಾಮುಲು ತಮ್ಮ ಸಹೋದರಿ ಬಿಜೆಪಿಯ ಅಭ್ಯರ್ಥಿ ಜೆ. ಶಾಂತಾರನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫ‌ಲರಾಗಿದ್ದಾರೆ. ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆಸಿದ ಸಂಘಟಿತ ಪ್ರಯತ್ನದಿಂದ ಕಾಂಗ್ರೆಸ್‌ ಇಲ್ಲಿ 6,28,365 ಮತ ಪಡೆದರೆ ಬಿಜೆಪಿ 3,85,204 ಮಾತ್ರ ಪಡೆಯಲು ಸಾಧ್ಯವಾಗಿದೆ.

ಶಿವಮೊಗ್ಗದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿಕೊಂಡಿದ್ದರೂ ಕಳೆದ ಲೋಕಸಭೆ ಚುನಾವಣೆಯ ಮತಗಳಿಗೆ ಅಂತರ ಎರಡು ಲಕ್ಷ ಕಡಿಮೆಯಾಗಿರುವುದು ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿದೆ. ಬಿಜೆಪಿಯ ರಾಘವೇಂದ್ರ 5,43,306 ಮತ ಪಡೆದರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತ ಪಡೆದಿದ್ದಾರೆ.

ಲಿಂಗಾಯತ ಸಮುದಾಯ ಹೆಚ್ಚಾಗಿರುವ ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ನಿರೀಕ್ಷೆಯಂತೆ ಗೆಲುವು ಪಡೆದಿದ್ದು, ಬಿಜೆಪಿಯ ಶ್ರೀಕಾಂತ್‌ ಕುಲಕರ್ಣಿ ಅವರಿಗಿಂತ 39476 ಹೆಚ್ಚು ಮತ ಪಡೆದಿರುವುದು ಬಿಜೆಪಿಗೆ ತೀವ್ರ ಹಿನ್ನೆಡೆಯಾಗಿದೆ. ಇಲ್ಲಿ ಖುದ್ದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೊಣೆಗಾರಿಕೆ ವಹಿಸಿಕೊಂಡಿದ್ದರು.
ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ರಾಮನಗರ ವಿಧಾನಸಭೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಫ‌ಲಿತಾಂಶ ನಿರೀಕ್ಷಿತವಾಗಿತ್ತು. ಆದರೆ,ಅಲ್ಲಿ  ಜೆಡಿಎಸ್‌ನ ಇಬ್ಬರೂ ಅಭ್ಯರ್ಥಿಗಳು ಹೆಚ್ಚು ಮತಗಳ ಅಂತರದಿಂದ ಗೆದ್ದು  ದಾಖಲೆ ಸೃಷ್ಟಿಸಿದ್ದಾರೆ.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್‌ ಕಣದಿಂದ ನಿವೃತ್ತಿಯಾದರೂ ಬಿಜೆಪಿ ನಾಯಕರು ಕಮ ಲ ಚಿನ್ಹೆಗೆ ಮತ ನೀಡಿ ಎಂದು ಮನವಿ ಮಾಡಿದ್ದು ಸ್ವಲ್ಪ ಮಟ್ಟಿಗೆ ಫ‌ಲ ಕೊಟ್ಟಿದ್ದು  15,906 ಮತ ಬಂದಿದೆ. ಅನಿತಾ ಕುಮಾರಸ್ವಾಮಿ 109,137 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Advertisement

ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಲ್‌.ಆರ್‌. ಶಿವರಾಮೇಗೌಡ ಮಂಡ್ಯದ ಇತಿಹಾಸದಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಪಡೆದಿದ್ದಾರೆ. 3,24,925 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ  2,44,377 ಮತ ಪಡೆದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 40 ಸಾವಿರ ಮತ ಪಡೆದಿತ್ತು. ಜೆಡಿಎಸ್‌ ಪ್ರಾಬಲ್ಯ ಇರುವ ರಾಮನಗರ ಮತ್ತು ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದ್ದರೂ ತನ್ನ ಶಕ್ತಿ ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಒಟ್ಟಾರೆ, ಫ‌ಲಿತಾಂಶದಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವಿನ ಭಿನ್ನಾಭಿಪ್ರಾಯ ಹಾಗೂ ಅಸಮಾಧಾನಗಳಿಗೆ‌ ಬ್ರೇಕ್‌ ಬಿದ್ದಂತಾಗಿದೆ. ಐದು ಕ್ಷೇತ್ರಗಳ ಪೈಕಿ  ಕನಿಷ್ಠ ಎರಡು ಲೋಕಸಭಾ ಕ್ಷೇತ್ರಗಳನ್ನಾದರೂ ಉಳಿಸಿಕೊಳ್ಳುವ ಭರವಸೆಯಲ್ಲಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಫ‌ಲಿತಾಂಶ ಆಘಾತ ನೀಡಿದ್ದು, ಮೈ ಮರೆತರೆ ಕಷ್ಟ ಎಂಬ ಪಾಠ ಕಲಿತಂತಾಗಿದೆ.

ಮೋದಿ ಸರ್ಕಾರದ ವಿರುದ್ಧದ ಗಾಳಿ ದೇಶದಲ್ಲಿ ಬೀಸುತ್ತಿದೆ. ನಾಲ್ಕು ಕ್ಷೇತ್ರಗಳಲ್ಲಿ ಚುನಾವಣಾ ಗೆಲುವಿನ ಅಂತರ ಹೆಚ್ಚಾಗಿದೆ. ಇದು ಜನರ ಅಭಿಪ್ರಾಯ ಏನಿದೆ ಎನ್ನುವ ಮುನ್ಸೂಚನೆ ಇದಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆ ಹೇಳುತ್ತೇನೆ. ಸಾಮೂಹಿಕ ನಾಯಕತ್ವಕ್ಕೆ ಗೆಲುವು ದೊರೆತಿದೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ 

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿರುವುದರಿಂದ ನಾಲ್ಕು ಕ್ಷೇತ್ರಗಳಲ್ಲಿ ಜಯ ದೊರೆತಿದೆ. ಶಿವಮೊಗ್ಗದಲ್ಲಿ ಕಡೆ ಗಳಿಗೆಯಲ್ಲಿ ಅಭ್ಯರ್ಥಿಯನ್ನು ಹಾಕಿದ್ದರಿಂದ ಸೋಲಾಯಿತು. ಹಳೆ ಭಿನ್ನಾಭಿಪ್ರಾಯ ಬಿಟ್ಟು ಕಾಂಗ್ರೆಸ್‌ ಜೊತೆ ಸೇರಿ ಮುಂದಿನ ಲೋಕಸಭೆ ಚುನಾವಣೆ ಎದುರಿಸುತ್ತೇವೆ.
– ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಉಪ ಚುನಾವಣೆಯಲ್ಲಿ ಜನತೆಯ ತೀರ್ಪನು ನಾವು ಒಪ್ಪಿಕೊಳ್ಳುತ್ತೇವೆ. ಚುನಾವಣೆಯಲ್ಲಿ ಎರಡೂ ಪಕ್ಷಗಳು ಅಧಿಕಾರ ದುರುಪಯೋಗಪಡೆಸಿಕೊಂಡು ಹಣ ಹಾಗೂ ಹೆಂಡವನ್ನು ರಾಜಾರೋಷವಾಗಿ ಹಂಚಿಕೆ ಮಾಡಿದರು. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಜ್ಯದಲ್ಲಿ 22-23 ಸ್ಥಾನ ಗೆಲ್ಲುವ ಗುರಿ ಹೊಂದುತ್ತೇವೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next