ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಈ ಫಲಿತಾಂಶಕ್ಕಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕಾತುರದಿಂದ ಕಾಯುತ್ತಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರಿಗೆ ಪ್ರತಿಷ್ಠೆಯಾಗಿರುವ ಫಲಿತಾಂಶದ ಮೇಲೆ ಇವರ ಮುಂದಿನ ರಾಜಕೀಯ ಭವಿಷ್ಯವೂ ಅಡಗಿರುವುದರಿಂದ ಕುತೂಹಲ ಮೂಡಿಸಿದೆ.
ಎರಡೂ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ಮತದಾನ ನಡೆದಿತ್ತು. ಇಂದು ಮತಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಆರ್.ಆರ್. ನಗರದಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ ನಿಂದ ಕುಸುಮಾ ಮತ್ತು ಜೆಡಿಎಸ್ ನಿಂದ ಕೃಷ್ಣ ಮೂರ್ತಿ ಸ್ಪರ್ಧಿಸಿದ್ದಾರೆ.
ಸಿರಾ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಅಮ್ಮಾಜಮ್ಮ, ಕಾಂಗ್ರೆಸ್ ನಿಂದ ಟಿ.ಬಿ ಜಯಚಂದ್ರ ಮತ್ತು ಬಿಜೆಪಿಯಿಂದ ರಾಜೇಶ್ ಗೌಡ ಅವರು ಸ್ಪರ್ಧೆ ನಡೆಸಿದ್ದಾರೆ.