Advertisement

ಉಪಚುನಾವಣೆ: ಪಕ್ಷಗಳಿಗೆ ಬಂಡಾಯದ್ದೇ ಸವಾಲು

10:32 AM Sep 27, 2019 | sudhir |

ಬೆಂಗಳೂರು: “ಮಿನಿ ಸಮರ ‘ಎಂದೇ ಬಿಂಬಿತವಾಗಿರುವ ರಾಜ್ಯದ ಹದಿನೈದು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮೂರೂ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ತೊಡಗಿವೆ.

Advertisement

ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಹಿನ್ನೆಲೆಯಲ್ಲಿ ಗುರುವಾರ ಅನರ್ಹತೆಗೊಂಡ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟತೆ ಸಿಗಲಿದ್ದು, ಅನಂತರ ಉಪ ಚುನಾವಣೆ ಕಣ ರಂಗೇರಲಿದೆ.

ಮೂರೂ ಪಕ್ಷಗಳು ಆಕಾಂಕ್ಷಿಗಳ ಪಟ್ಟಿ ಮುಂದಿಟ್ಟುಕೊಂಡು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ. ಸಮರ್ಥ ಅಭ್ಯರ್ಥಿ ಆಯ್ಕೆಗೆ ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿವೆ.

ಈ ಮಧ್ಯೆ ಇ.ಡಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಜಾಮೀನು ಅರ್ಜಿ ತಿರಸ್ಕೃತವಾಗಿರುವುದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ಸಿಗುವ ಸಾಧ್ಯತೆಯಿಲ್ಲ.

ಮೂರೂ ಪಕ್ಷಗಳಲ್ಲಿ ಟಿಕೆಟ್‌ ಸಿಗದಿದ್ದರೆ ಆಕಾಂಕ್ಷಿಗಳು ಬಂಡಾಯ ಏಳುವ ಲಕ್ಷಣಗಳು ಕೆಲವು ಕ್ಷೇತ್ರಗಳಲ್ಲಿ ಕಂಡು ಬರುತ್ತಿವೆ. ಹೊಸಕೋಟೆ, ಕಾಗವಾಡ, ಕೆ.ಆರ್‌.ಪುರಂ, ಹಿರೇಕೆರೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ. ಹೊಸಕೋಟೆಯಲ್ಲಿ ಬಚ್ಚೇಗೌಡರ ಪುತ್ರ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದು, ಕ್ಷೇತ್ರದ ಮತದಾರರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದು ಬಿಜೆಪಿಗೆ ತಲೆಬಿಸಿ ತಂದಿದೆ.

Advertisement

ಕಾಂಗ್ರೆಸ್‌ನಲ್ಲೂ ಯಶವಂತಪುರ, ಮಹಾಲಕ್ಷ್ಮೀ ಲೇ ಔಟ್‌, ಚಿಕ್ಕಬಳ್ಳಾಪುರ , ಕೆ.ಆರ್‌.ಪೇಟೆ ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಪೈಪೋಟಿಯಿದೆ. ಒಂದೊಂದು ಕ್ಷೇತ್ರದಲ್ಲೂ ಮೂರ್‍ನಾಲ್ಕು ಆಕಾಂಕ್ಷಿಗಳಿದ್ದಾರೆ.

ಜೆಡಿಎಸ್‌ನಲ್ಲಿ ಕೆ.ಆರ್‌.ನಗರ, ಹುಣಸೂರು, ಚಿಕ್ಕಬಳ್ಳಾಪುರ, ಮಹಾಲಕ್ಷ್ಮೀ ಲೇ ಔಟ್‌, ಯಶವಂತಪುರ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿಯಿದೆ. ಇದರ ಮಧ್ಯೆ ಬಿಜೆಪಿಯಲ್ಲಿನ ಅಸಮಾಧಾನಿತರ ಕಡೆ ಕಾಂಗ್ರೆಸ್‌ ದೃಷ್ಟಿ ಹರಿಸಿದೆ. ಕಾಂಗ್ರೆಸ್‌ನಲ್ಲಿನ ಆಕಾಂಕ್ಷಿಗಳ ಕಡೆ ಜೆಡಿಎಸ್‌ ನೋಡುತ್ತಿದೆ.

ಬಿಜೆಪಿ
ಬುಧವಾರ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಕೆಲವೆಡೆ ಬಂಡಾಯದ ಮುನ್ಸೂಚನೆ ಇರುವುದರಿಂದ ಅದನ್ನು ಶಮನಗೊಳಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಯಿತು. ಅನರ್ಹಗೊಂಡವರು ಸ್ಪರ್ಧೆ ಮಾಡಲು ನ್ಯಾಯಾಲಯದಲ್ಲಿ ಗ್ರೀನ್‌ ಸಿಗ್ನಲ್‌ ದೊರೆತರೆ ಎಲ್ಲರಿಗೂ ಟಿಕೆಟ್‌ ನೀಡುವ ಸಾಧ್ಯತೆಯಿದೆ. ಇಲ್ಲದಿದ್ದರೆ ಪರ್ಯಾಯ ಅಭ್ಯರ್ಥಿಗಳನ್ನು ಅದರಲ್ಲೂ ಅನರ್ಹಗೊಂಡ ಶಾಸಕರು ಸೂಚಿಸುವ ಅಭ್ಯರ್ಥಿಗಳಿಗೆ ಮಣೆ ಹಾಕುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್‌
ಕಾಂಗ್ರೆಸ್‌ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಅಭ್ಯರ್ಥಿಗಳ ಆಯ್ಕೆಯಲ್ಲಿ ಲೆಕ್ಕಾಚಾರದ ಹೆಜ್ಜೆ ಇಡುತ್ತಿದೆ. ಬುಧವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಪ್ರಬಲ ಪೈಪೋಟಿ ಇರುವ ಉಳಿದ ಕ್ಷೇತ್ರಗಳ ಆಕಾಂಕ್ಷಿಗಳನ್ನು ಕರೆದು ಚರ್ಚಿಸಲಾಯಿತು. ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಬೆಂಗಳೂರಿಗೆ ಆಗಮಿಸಿದ್ದು ಗುರುವಾರ ರಾಜ್ಯ ನಾಯಕರ ಜತೆ ಚರ್ಚಿಸಿ ಅನಂತರ ಹೈಕಮಾಂಡ್‌ಗೆ ಪಟ್ಟಿ ರವಾನಿಸುವ ಸಾಧ್ಯತೆಯಿದೆ.

ಜೆಡಿಎಸ್‌
ಇನ್ನು ಜೆಡಿಎಸ್‌ನಲ್ಲೂ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತುಗಳು ನಡೆದಿದ್ದು, ಗುರುವಾರ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು ಅಲ್ಲಿ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಲಾಗಿದೆ.

ನಿಖೀಲ್‌-ಪ್ರಜ್ವಲ್‌ಗೆ ಉಸ್ತುವಾರಿ?
ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಚುನಾವಣೆ ಉಸ್ತುವಾರಿ ನಿಖೀಲ್‌ ಕುಮಾರಸ್ವಾಮಿಗೆ ವಹಿಸುವ ಸಾಧ್ಯತೆಯಿದೆ. ಅದೇ ರೀತಿ ಹುಣಸೂರು ಕ್ಷೇತ್ರದ ಉಸ್ತುವಾರಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ವಹಿಸಲು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next