Advertisement

ಉಪ ಚುನಾವಣೆ: ಅನರ್ಹರಿಗೆ ಆಘಾತ

09:47 AM Sep 23, 2019 | mahesh |

ಬೆಂಗಳೂರು: ರಾಜ್ಯದ ಹದಿನೈದು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ದಿಢೀರ್‌ ಘೋಷಣೆ ಅನರ್ಹಗೊಂಡ ಶಾಸಕರಿಗೆ ಆಘಾತ ನೀಡಿದೆ. ತಮ್ಮ ಅನರ್ಹತೆ ವಿಚಾರ ಇತ್ಯರ್ಥವಾಗುವವರೆಗೂ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡುವುದಿಲ್ಲ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ತಮ್ಮ ನೆರವಿಗೆ ಬರಬಹುದು ಎಂಬ ಅವರ ಊಹೆಯೂ ಸುಳ್ಳಾಗಿದ್ದು, ದಿಕ್ಕುತೋಚದಂತಾಗಿದೆ.

Advertisement

ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ರದ್ದುಗೊಂಡು ರಾಜೀನಾಮೆ ಅಂಗೀಕಾರ ವಿಚಾರ ಮತ್ತೆ ಸ್ಪೀಕರ್‌ ಬಳಿ ಬರಲಿದೆ. ರಾಜೀನಾಮೆ ಅಂಗೀಕಾರ ಆಗುತ್ತಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಕನಸು ಕಾಣುತ್ತಿದ್ದವರಿಗೆ ಆಯೋಗ ಶಾಕ್‌ ಟ್ರೀಟ್‌ಮೆಂಟ್‌ ನೀಡಿದಂತಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ಎರಡೂ ಪಕ್ಷಗಳಿಗೆ ಆದ ಹಿನ್ನಡೆ, ಹೀನಾಯ ಸೋಲು, ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತ್ಯೇಕವಾಗಿ ಸ್ಪರ್ಧೆಗೆ ನಿರ್ಧರಿಸಿರುವುದು ಬಹುತೇಕ ತ್ರಿಕೋನ ಸ್ಪರ್ಧೆಗೆ ಕಣ ಸಜ್ಜಾದಂತಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಮತ ವಿಭಜನೆಯಿಂದ ಗೆಲುವು ಸಾಧಿಸಬಹುದು ಎಂದು ಬಿಜೆಪಿ ಲೆಕ್ಕಾಚಾರ. ಆದರೆ ಸ್ಥಳೀಯ ಮಟ್ಟದಲ್ಲಿ ರಾಜಕಾರಣ ಬೇರೆಯದೇ ಸ್ವರೂಪ ಪಡೆದರೆ ಪ್ರಬಲ ಹೋರಾಟವೇ ಇರಲಿದ್ದು ಟಫ್ ಫೈಟ್‌ ನಡೆಯಲಿದೆ.

ಕುಟುಂಬದವರ ಸ್ಪರ್ಧೆ?
ಅನರ್ಹ ಶಾಸಕರೆಲ್ಲರೂ ಈಗ ಮತ್ತೆ ಸುಪ್ರೀಂಕೋರ್ಟ್‌ ಮುಂದೆ ಹೋಗಬೇಕಾಗಿದೆ. ಅಲ್ಲಿ ಅವರ ಪರವಾಗಿ ತೀರ್ಪು ಬಾರದಿದ್ದರೆ ಉಪ ಚುನಾವಣೆಗೆ ಅನಿವಾರ್ಯವಾಗಿ ಪತ್ನಿ, ಸಹೋದರ ಸೇರಿದಂತೆ ಕುಟುಂಬ ಸದಸ್ಯರು ಅಥವಾ ನಿಷ್ಠಾವಂತ ಬೆಂಬಲಿಗರನ್ನು ಕಣಕ್ಕಿಳಿಸಬೇಕಾಗಿದೆ.

ಚುನಾವಣೆ ವಿಚಾರ ಒಂದು ಕಡೆಯಾದರೆ ಮತ್ತೂಂದು ಕಡೆ ಅವರು ಹದಿನೈದನೇ ವಿಧಾನಸಭೆಯ ಸಂಪೂರ್ಣ ಅವಧಿಗೆ ಅನರ್ಹತೆಗೊಂಡಿರುವುದರಿಂದ ಬಿಜೆಪಿ ಸರಕಾರದಲ್ಲಿ ಯಾವುದೇ ಹುದ್ದೆ ಪಡೆಯುವಂತೆಯೂ ಇಲ್ಲ. ಹೀಗಾಗಿ, ಅನರ್ಹರಿಗೆ ಇಕ್ಕಟ್ಟೇ.

Advertisement

ಬಿಜೆಪಿ ನಾಯಕರಿಂದಲೂ ಬೇಡಿಕೆ ಸಂಭವ
ಮತ್ತೂಂದು ಆತಂಕ ಎಂದರೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಯಿಂದಲೂ ತಲಾ ಒಂದೆರಡು ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಅನರ್ಹರು ಸ್ಪರ್ಧಿಸದಿದ್ದರೆ ನಮಗೆ ಅವಕಾಶ ಕೊಡಿಸಿ ಎಂದು ಅವರು ನಾಯಕರಿಗೆ ದುಂಬಾಲು ಬೀಳಬಹುದು.

ನೋ ಚಾನ್ಸ್‌ ಅಂದಿದ್ದರು ಎಸ್‌ಟಿಎಸ್‌
ಶನಿವಾರ ಬೆಳಗ್ಗೆಯಷ್ಟೇ ಪತ್ರಿಕೆ ಜತೆ ಮಾತನಾಡಿದ್ದ ಯಶವಂತಪುರ ಕ್ಷೇತ್ರದ ಎಸ್‌.ಟಿ. ಸೋಮಶೇಖರ್‌, ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪ್ರಕರಣ ಇತ್ಯರ್ಥವಾಗುವವರೆಗೆ ಚುನಾವಣೆ ಘೋಷಣೆ ಮಾಡಬಾರದು ಎಂದು ಮನವಿ ಮಾಡಿದ್ದೇವೆ ಎಂದಿದ್ದರು. ಅದಾದ ಅರ್ಧ ತಾಸಿನಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಹೊರಬಿದ್ದಿದೆ.

- ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next