Advertisement

ಉಪಚುನಾವಣೆ: ಬಿಜೆಪಿಗೆ ನಾಯಕತ್ವ ಪ್ರಶ್ನೆ, ಕೈಗೆ ಪ್ರತಿಷ್ಠೆ, ಜೆಡಿಎಸ್‌ ಗೆ ದಿಕ್ಸೂಚಿ

09:27 AM Nov 02, 2021 | Team Udayavani |

ಬೆಂಗಳೂರು: ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಫ‌ಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ಈ ಫ‌ಲಿತಾಂಶ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಿದ್ದರೂ, ಮೂರು ಪಕ್ಷಗಳಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಯಿಸಲು ಹಾಗೂ ಮುಂದಿನ ಚುನಾವಣೆಯ ಕಾರ್ಯತಂತ್ರ ರೂಪಿಸಲು ಸಂದೇಶ ರವಾನಿಸುವ ಸಾಧ್ಯತೆಯಿದೆ.

Advertisement

ಎರಡೂ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸದಲ್ಲಿದ್ದರೂ, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯ ರ್ಥಿಗಳ ನಡುವೆಯೇ ಸೋಲು ಗೆಲುವಿನ ಆಟ ನಡೆಯಲಿದ್ದು, ಎರಡೂ ಪಕ್ಷಗಳ ಸೋಲು, ಗೆಲುವಿನ ಆಟ ನಿರ್ಧರಿಸುವ ಪಾತ್ರವನ್ನು ಜೆಡಿಎಸ್‌ ವಹಿಸುವ ಸಾಧ್ಯತೆ ಇದೆ.

ಬಿಜೆಪಿಯಲ್ಲಿ ನಾಯಕತ್ವ ನಿರ್ಧಾರ?; ಎರಡು ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ಆಡಳಿತ ಪಕ್ಷ ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಎರಡೂ ಕ್ಷೇತ್ರಗಳ ಗೆಲುವು ಅತ್ಯಂತ ಮಹತ್ವದ್ದಾಗಿದೆ.

ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ತಮ್ಮದೇ ನಾಯಕತ್ವದಲ್ಲಿ ರಾಜ್ಯ ಪ್ರವಾಸ, ಪಕ್ಷ ಸಂಘಟನೆ ಮಾಡಿ, ಮುಂದಿನ ಬಾರಿ ತಮ್ಮ ಹಿಡಿತದಲ್ಲಿರುವವರೇ ಮುಖ್ಯಮಂತ್ರಿ ಗಾದಿಗೆ ಏರಬೇಕು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ, ಅವರ ರಾಜೀನಾಮೆ ನಂತರ ಬಿಜೆಪಿಯಲ್ಲಿ ಚಿತ್ರಣ ಬದಲಾಗಿದ್ದು, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಹಿರಂಗವಾಗಿಯೇ ಹೇಳಿದ್ದು, ಸ್ವತಃ ಬಸವರಾಜ ಬೊಮ್ಮಾಯಿ ಕೂಡ ತಮ್ಮ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಹೇಳಿರುವುದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಕೆಲವು ಹಿರಿಯ ನಾಯಕರಿಗೆ ಹೈಕಮಾಂಡ್‌ನ‌ ಈ ನಡೆ ಅಪಥ್ಯವೂ ಆಗಿದೆ. ಹೀಗಾಗಿ ಈ ಎರಡು ಕ್ಷೇತ್ರಗಳ ಫ‌ಲಿತಾಂಶ ಮುಂದಿನ ಚುನಾವಣೆಗೆ ಯಾರ ನಾಯಕತ್ವ ಇರಬೇಕು ಎನ್ನುವುದನ್ನು ಬಿಂಬಿಸುವ ಸಾಧ್ಯತೆಯಿದೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಅಬಾಧಿತವಾಗಿರಲಿದೆ. ಫ‌ಲಿತಾಂಶದಲ್ಲಿ ವ್ಯತ್ಯಾಸವಾದರೆ, ಮುಂದಿನ ಚುನಾವಣೆಯ ನಾಯಕತ್ವದ ಕುರಿತು ಬಿಜೆಪಿಯಲ್ಲಿಯೇ ಆಂತರಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Advertisement

ಕೈನಲ್ಲಿ ಪ್ರತಿಷ್ಠೆಯ ಪ್ರಶ್ನೆ: ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮಬಲದ ಶಕ್ತಿ ಪ್ರದರ್ಶನ ಮಾಡಿದ್ದು, ಆದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರದಲ್ಲಿ ಪ್ರಬಲವಾಗಿ ಗೋಚರಿಸಿದ್ದು, ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಿಗೆ ಅವರೇ ನೇರ ಟಾರ್ಗೆಟ್‌ ಆಗಿದ್ದರು. ಒಂದು ವೇಳೆ ಈ ಚುನಾವಣೆಯ ಫ‌ಲಿತಾಂಶ ಕಾಂಗ್ರೆಸ್‌ ಪರ ಬಂದರೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಪ್ರಾಭಲ್ಯತೆಗಾಗಿ ಮತ್ತಷ್ಟು ಆಂತರಿಕ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ. ಮುಂದಿನ ಚುನಾವಣೆಯಲ್ಲಿ ತಮ್ಮದೇ ನಾಯಕತ್ವ ಎಂದು ಬಿಂಬಿಸಿಕೊಳ್ಳಲು ಇಬ್ಬರೂ ನಾಯಕರೂ ಪರೋಕ್ಷವಾಗಿ ಪೈಪೋಟಿಗಿಳಿಯುವ ಸಾಧ್ಯತೆ ಇದೆ.

ಒಂದು ವೇಳೆ, ಕಾಂಗ್ರೆಸ್‌ ಎರಡೂ ಕ್ಷೇತ್ರದಲ್ಲಿ ಸೋತರೆ, ಕೆಪಿಸಿಸಿ ಅಧ್ಯಕ್ಷರನ್ನೇ ಹೆಚ್ಚಿನ ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆಗ ಕಾಂಗ್ರೆಸ್‌ನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಕಾರ್ಯತಂತ್ರ ಬದಲಾಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಭವಿಷ್ಯದ ಕಾರ್ಯತಂತ್ರಕ್ಕೆ ದಿಕ್ಸೂಚಿ : ಈ ಉಪಚುನಾವಣೆಯಲ್ಲಿ ಜೆಡಿಎಸ್‌ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದು ಕೊಂಡು ಪ್ರಚಾರ ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದರಿಂದ ಪರೋಕ್ಷವಾಗಿ ಕಾಂಗ್ರೆಸ್‌ ಅಭ್ಯರ್ಥಿ ಗಳನ್ನು ಸೋಲಿಸಲು ಜೆಡಿಎಸ್‌ ಈ ಕಾರ್ಯತಂತ್ರ ಪ್ರಯೋಗಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ ಆರೋಪ ಏನೇ ಇದ್ದರೂ, ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವುದರ ಮೇಲೆ ಜೆಡಿಎಸ್‌ ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಈ ಫ‌ಲಿತಾಂಶ ದಿಕ್ಸೂಚಿಯಾಗುವ ಸಾಧ್ಯತೆಯಿದೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next