Advertisement
ಒಂದೆಡೆ ಬುಧವಾರ ಪ್ರಕಟವಾಗುವ ಸುಪ್ರೀಂ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಯಾರನ್ನು ಕಣಕ್ಕಿಳಿಸುವುದು ಎಂದು ಬಿಜೆಪಿ ಚಿಂತೆಗೀಡಾಗಿದೆ. ಮತ್ತೂಂದೆಡೆ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಕಣಕ್ಕಿಳಿಯುವ ಚಿಂತನೆಯಲ್ಲಿದ್ದರೆ, ರಾಜು ಕಾಗೆ ಹಾಗೂ ಅಶೋಕ್ ಪೂಜಾರಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ತಲೆನೋವಾಗಿ ಪರಿಣಮಿಸಿದೆ. ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿರುವ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ.
ತರಾತುರಿಯಲ್ಲಿ ಅಭ್ಯರ್ಥಿ ಘೋಷಿಸಿರುವ ಬಗ್ಗೆ ರವಿವಾರ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಕೆ.ಆರ್. ಪುರ ಹಾಗೂ ಹೊಸಕೋಟೆ ಕ್ಷೇತ್ರದ ಅಭ್ಯರ್ಥಿಗಳನ್ನು ತರಾತುರಿಯಲ್ಲಿ ಘೋಷಿಸಿರುವುದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಿ.ಕೆ.ಶಿ. ಪ್ರವೇಶ
ಚುನಾವಣೆಗೆ ದಿನಗಣನೆ ಆರಂಭವಾಗಿರು ವಂತೆಯೇ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ರಂಗ ಪ್ರವೇಶಿಸಿರುವುದು ವಿಶೇಷ. ಕಾಗವಾಡ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ರಾಜು ಕಾಗೆ, ಗೋಕಾಕ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಅಶೋಕ್ ಪೂಜಾರಿ ರವಿವಾರ ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆದರೆ ಈ ಬಗ್ಗೆ ಪಕ್ಷದಲ್ಲಿ ಅಪಸ್ವರ ಕೇಳಿಬಂದಿದೆ ಎನ್ನಲಾಗಿದೆ.
Related Articles
ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಹೊಸಕೋಟೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಶರತ್ ಬಚ್ಚೇಗೌಡ ಅವರ ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಕಷ್ಟು ಪ್ರಯತ್ನ ನಡೆಸಿದರೂ ಫಲ ನೀಡಿದಂತಿಲ್ಲ. ಹಾಗಾಗಿ ಕ್ಷೇತ್ರದ ಕಾರ್ಯಕರ್ತರಲ್ಲೂ ಗೊಂದಲ ಸೃಷ್ಟಿಯಾದಂತಿದೆ. ಇನ್ನೊಂದೆಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ರಾಜು ಕಾಗೆ, ಅಶೋಕ್ ಪೂಜಾರಿ ಅವರು ಡಿ.ಕೆ.ಶಿ.ಭೇಟಿಯಾಗಿರುವುದು ಬಿಜೆಪಿ ನಾಯಕರಿಗೆ ತಲೆನೋವಾಗಿದೆ.
Advertisement