Advertisement
ಕಳೆದ ಮೂರು ತಿಂಗಳ ಹಿಂದೆ ಬಿಜೆಪಿಯ ಆಪರೇಷನ್ ಕಮಲದಿಂದ ಜೆಡಿಎಸ್ ನಾಯಕತ್ವದ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್ ಮಧ್ಯಂತರ ಸಾರ್ವತ್ರಿಕ ಚುನಾವಣೆಯ ಭಜನೆಯನ್ನು ಮಾಡುತ್ತಾ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವ ಪ್ರಯತ್ನ ಮಾಡಿತ್ತು. ಆದರೆ, ಅಧಿಕೃತವಾಗಿ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಈಗ ಚುನಾವಣಾ ಕ್ಷೇತ್ರಗಳತ್ತ ಮುಖ ಮಾಡಿದೆ.
Related Articles
Advertisement
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಹದಿನಾಲ್ಕು ತಿಂಗಳ ಅವಧಿಯಲ್ಲಿ ಮಾಡಿದ ಅಷ್ಟೂ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲವೆಂಬ ಅಸಮಾಧಾನ ಜೆಡಿಎಸ್ ವರಿಷ್ಠರಲ್ಲಿದ್ದು, ಈಗ ಪುಸ್ತಕದ ರೂಪದಲ್ಲಿ ಸ್ವತಃ ಪಕ್ಷದ ಮೂಲಕವೇ ಜೆಡಿಎಸ್ ನಾಯಕತ್ವದ ಸರ್ಕಾರದ ಸಾಧನೆಗಳನ್ನು ತಲುಪಿಸುವ ಪ್ರಯತ್ನ ಆರಂಭಗೊಂಡಿದ್ದು, ಇದರಿಂದ ಮಂಡ್ಯ ಜಿಲ್ಲೆ ಕೂಡ ಹೊರತಾಗಿಲ್ಲ.
ಆಪರೇಷನ್ ಭೀತಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್ ದಾಖಲೆಯ ಗೆಲುವನ್ನು ಸಾಧಿಸಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡರೇ ಆಪರೇಷನ್ ಕಮಲಕ್ಕೆ ಒಳಗಾಗಿದ್ದು, ಜೆಡಿಎಸ್‌ಗೆ ಆಘಾತ ಉಂಟುಮಾಡಿತ್ತು. ಅಲ್ಲದೆ, ಜಿಲ್ಲೆಯ ಜೆಡಿಎಸ್‌ನ ಮತ್ತಿಬ್ಬರು ಶಾಸಕರನ್ನು ಬಿಜೆಪಿ ಆಪರೇಷನ್ ಕಮಲಕ್ಕೆ ಒಳಪಡಿಸುವ ವದಂತಿಯಿದ್ದು, ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಜೆಡಿಎಸ್ ಸಾಲಮನ್ನಾದ ಫಲಾನುಭವಿಗಳನ್ನು ಮುಂದಿಟ್ಟುಕೊಂಡು ಪಕ್ಷದ ಬಲವರ್ಧನೆಗೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಶ್ಚಿತ ಮತದಾರರು: ಸದ್ಯದ ಸ್ಥಿತಿಯಲ್ಲಿ ಕೆ.ಆರ್ .ಪೇಟೆ ಕ್ಷೇತ್ರವನ್ನು ಕೇಂದ್ರೀಕರಿಸಿರುವ ಜೆಡಿಎಸ್ ಸದರಿ ಕ್ಷೇತ್ರದಲ್ಲಿ ಇರುವ ಫಲಾನುಭವಿಗಳನ್ನು ಜಾಗೃತಗೊಳಿಸುವ ಮತ್ತು ಜೆಡಿಎಸ್‌ನ ಕಾಯಂ ಮತದಾರರನ್ನಾಗಿ ಪರಿವರ್ತಿಸುವ ಪ್ರಯತ್ನಕ್ಕೆ ಮುಂದಾದಂತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ಮಹತ್ವದ ಅನುಕೂಲಗಳು ಆಗಲಿಲ್ಲವೆಂಬ ವಿರೋಧಿಗಳ ಬಾಯಿ ಮುಚ್ಚಿಸುವ ಪ್ರಯತ್ನ ಕೂಡ ಇದೇ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್ ಸರ್ಕಾರದ ಅಧಿಕಾರವಧಿಯಲ್ಲಿ ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಪುನಶ್ಚೇತನಕ್ಕೆ ಸೂಕ್ತ ಆದ್ಯತೆ ನೀಡಲಿಲ್ಲ ಎಂಬ ಆರೋಪಗಳು ಗಟ್ಟಿಯಾಗಿ ಕೇಳಿಬರುತ್ತಿರುವ ದಿನಗಳಲ್ಲಿ ಅದೇ ರೈತರಿಗೆ ಸಾಲ ಮನ್ನಾದಿಂದ ಆಗಿರುವ ಅನುಕೂಲಗಳನ್ನು ಹೇಳುತ್ತಾ ಜೆಡಿಎಸ್ ರೈತಪರವಾದ ಪಕ್ಷ ಎಂದು ಬಿಂಬಿಸಿಕೊಳ್ಳುವ ಉದ್ದೇಶ ಕೂಡ ಸಾಲ ಮನ್ನಾ ಪುಸ್ತಕ ಪ್ರಕಟಣೆಯ ಹಿಂದಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್‌ನ ಆಂತರಿಕ ಅಸಹಕರವನ್ನು ಬಹಿರಂಗಪಡಿಸುತ್ತಿದ್ದು, ಕಾಂಗ್ರೆಸ್ಸಿಗರ ಕಿರುಕುಳವನ್ನೂ ಸಹಿಸಿಕೊಂಡು ಸಾಲ ಮನ್ನಾದಂತಹ ಮಹತ್ವದ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿರುವುದಕ್ಕೆ ಸಾಕ್ಷಿಯಾಗಿ ಹೊರತರಲಾಗಿರುವ ಈ ಪುಸ್ತಕದ ಮೂಲಕ ಜೆಡಿಎಸ್‌ಗೆ ಭವಿಷ್ಯ ಕಂಡು ಕೊಳ್ಳುವ ಪ್ರಯತ್ನ ನಡೆಸುತ್ತಿದ್ದು ಇದು ಎಷ್ಟು ಮಟ್ಟಿಗೆ ಫಲ ನೀಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಜೆಡಿಎಸ್ ಸಾಲಮನ್ನಾ ಪುಸ್ತಕದಲ್ಲೇನಿದೆ? :
ಜೆಡಿಎಸ್ ಹೊರಡಿಸಿರುವ ಸಾಲ ಮನ್ನಾ ಪುಸ್ತಕದಲ್ಲಿ ಫಲಾನುಭವಿಯ ಹೆಸರು, ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ನಂಬರ್ ಇದ್ದು ಪ್ರತಿ ಕ್ಷೇತ್ರದಲ್ಲಿ ಎಷ್ಟು ಮಂದಿ ಫಲಾನುಭವಿಗಳಿಗೆ ಸಾಲ ಮನ್ನಾದ ಅನುಕೂಲ ಸಿಕ್ಕಿದೆ ಎನ್ನುವುದನ್ನು ದಾಖಲೆಗಳ ಸಹಿತಸಾಧನೆಯಾಗಿ ಪ್ರತಿಬಿಂಬಿಸುವ ಕೆಲಸವನ್ನು ಜೆಡಿಎಸ್ ಈ ಮೂಲಕ ಮಾಡುತ್ತಿದೆ.
ಪಕ್ಷ ಬಲವರ್ಧನೆ ಸಾಹಸ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾದ ಘೋಷಣೆಯಿಂದಲೇ ರೈತರ ಮನಗೆಲ್ಲುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ, ಮುಖ್ಯಮಂತ್ರಿ ಆದ ನಂತರವೂ ಮೈತ್ರಿ ಸರ್ಕಾರದಲ್ಲಿ ಕೂಡ ಕೊಟ್ಟ ಮಾತಿನಂತೆ ನಡೆದುಕೊಂಡಿರುವುದನ್ನು ನೆನೆಪಿಸುವ ಪ್ರಯತ್ನ ಇದಾಗಿದ್ದು, ಯಾವ ರೈತರ ಸಾಲ ಮನ್ನಾ ಘೋಷಣೆಯೊಡನೆ ಅಧಿಕಾರ ಹಿಡಿಯಲು ಸಾಧ್ಯವಾಯಿತೋ ಅದೇ ಸಾಲ ಮನ್ನಾದ ಸಾಧನೆಯನ್ನು ಮುಂದಿಟ್ಟು ಪಕ್ಷವನ್ನು ಕಟ್ಟುವ ಸಾಹಸಕ್ಕೆ ಮುಂದಾಗಿದ್ದಾರೆ.
-ಮಂಡ್ಯ ಮಂಜುನಾಥ್