Advertisement

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

10:41 PM Oct 15, 2021 | Team Udayavani |

ಬೆಂಗಳೂರು: ಆಯುಧಪೂಜೆ-ವಿಜಯದಶಮಿ ಹಬ್ಬ ಮುಗಿಯುತ್ತಿದ್ದಂತೆ ಮೂರೂ ಪಕ್ಷಗಳ ನಾಯಕರು ಉಪ ಚುನಾವಣೆಯತ್ತ ಗಮನ ನೆಟ್ಟಿದ್ದು, ಶನಿವಾರದಿಂದ ನಾಯಕರ ದಂಡು ಪ್ರಚಾರಕ್ಕೆ ಇಳಿಯಲಿದೆ.

Advertisement

ಪ್ರಚಾರದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಆಪ್ತ ಸಂಭಾಷಣೆ ವಿವಾದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಟ್ವೀಟ್‌ ವಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧದ ಸಿ.ಡಿ. “ಬಾಂಬ್‌’ ಮುಂತಾದ ವಿಚಾರಗಳೂ ಪ್ರಸ್ತಾವಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ.

ಈ ಮಧ್ಯೆ, ಆಪ್ತರ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪ್ರಚಾರದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ ಈಗ ಅವರು ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ. ಮೊದಲು ಮುಖ್ಯಮಂತ್ರಿ ಪ್ರಚಾರ ನಡೆಸಲಿದ್ದು, ಬಳಿಕ ಯಡಿಯೂರಪ್ಪ ತೆರಳಲಿದ್ದಾರೆ.

ಅ.17ರಂದು ಮುಖ್ಯಮಂತ್ರಿಗಳು ಹಾನಗಲ್‌ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಲಿದ್ದಾರೆ. ಯಡಿಯೂರಪ್ಪ ಅವರು ಅ.22 ಮತ್ತು 23ರಂದು ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅ.20 ಮತ್ತು 21ರಂದು ಯಡಿಯೂರಪ್ಪ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುವಾಗಲೂ ಅವರೊಂದಿಗೆ ಸಿ ಎಂ ಇರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಹಾನಗಲ್‌ ಉಸ್ತುವಾರಿ ವಹಿಸಿಕೊಂಡಿರುವ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಒಂದು ವಾರ ದುಬೈ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ 2-3 ದಿನ ಮಾತ್ರ ಪ್ರಚಾರ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಕಾಂಗ್ರೆಸ್‌ನಿಂದ
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಕೂಡ ಪ್ರತ್ಯೇಕವಾಗಿಯೇ ಪ್ರಚಾರ ನಡೆಸಲಿದ್ದಾರೆ.ಶನಿವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಾನಗಲ್‌ನಲ್ಲಿ ಪ್ರಚಾರ ನಡೆಸಲಿದ್ದು, ಎರಡು ದಿನ ಕ್ಷೇತ್ರದಲ್ಲೇ ಇರಲಿದ್ದಾರೆ. ಅನಂತರ ಸಿಂದಗಿಗೆ ತೆರಳಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಮತ್ತು ರವಿವಾರ ಸಿಂದಗಿಯಲ್ಲಿ ಹಾಗೂ ಸೋಮವಾರ ಮತ್ತು ಮಂಗಳವಾರ ಹಾನಗಲ್‌ನಲ್ಲಿ ಪ್ರಚಾರ ನಡೆಸಲಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲಾ ಅವರು ಅ.19ರಂದು ಸಿಂದಗಿ ಹಾಗೂ 20ರಂದು ಹಾನಗಲ್‌ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಇವರ ಜತೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಚ್‌.ಕೆ.ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ಎಂ.ಬಿ.ಪಾಟೀಲ್‌, ಎಸ್‌.ಆರ್‌.ಪಾಟೀಲ್‌ ಮುಂತಾದ ಪ್ರಮುಖರು ಹಾಜರಿರಲಿದ್ದಾರೆ.

ಜೆಡಿಎಸ್‌ ಕಾರ್ಯತಂತ್ರ ಶುರು
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈಗಾಗಲೇ ಸಿಂದಗಿಯಲ್ಲಿ ಪ್ರಚಾರ ಆರಂಭಿಸಿದ್ದು, ಅಲ್ಲಿಂದ ಹಾನಗಲ್‌ಗೆ ಬರಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next