ಬೆಂಗಳೂರು: ಪಕ್ಷದ “ಬಿ’ ಫಾರಂ ಬರೆಯುವುದು ಹಾಗೂ ಅದಕ್ಕೆ ಸಹಿ ಹಾಕುವುದು ನಾನೇ. ಯಾರನ್ನೇ ನಿಲ್ಲಿಸಿದರೂ ವೋಟು ಹಾಕುವುದೂ ನನಗೇ. ಹಾಗಾಗಿ ಚನ್ನಪಟ್ಟಣದ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾನೇ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಪಟ್ಟಣ ಉಪಚುನಾವಣೆ ವಿಚಾರದಲ್ಲಿ ವಿಪಕ್ಷಗಳು ಒಂದಾಗಲಿ, ಎರಡಾಗಲಿ ಅಥವಾ ಮೂರು ಬೇಕಾದರೂ ಆಗಲಿ, ನಮಗೆ ಅದರ ಸಂಬಂಧ ಇಲ್ಲ. ನಾವು ಜನಸೇವೆ ಮಾಡುತ್ತೇವೆ. ಉಳಿದಿದ್ದನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು.
ಸಿ.ಪಿ. ಯೋಗೇಶ್ವರ ಕಾಂಗ್ರೆಸ್‌ಗೆ ಬಂದರೆ ಆಹ್ವಾನಿಸುತ್ತೀರಾ ಎಂದು ಕೇಳಿದಾಗ, ನೀವ್ಯಾಕೆ ಇದರ ಬಗ್ಗೆ ಮಾತನಾಡುತ್ತೀರಾ? ನಮ್ಮ ಬಳಿಗೆ ಯಾರೂ ಬಂದಿಲ್ಲ, ಚರ್ಚೆಯನ್ನೂ ಮಾಡಿಲ್ಲ. ಅವರು ಮೈತ್ರಿ ಮಾಡಿಕೊಂಡಿರುವಾಗ ಅವರ ಬಗ್ಗೆ ಯಾಕೆ ಮಾತನಾಡಬೇಕು? ಮೊದಲು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತೇನೆ ಎಂದರು.
ನನಗೂ ಸಿಎಂ ಆಗುವ ಆಸೆ ಇದೆ, ದುರಾಸೆ ಇಲ್ಲ: ಎಂ.ಬಿ. ಪಾಟೀಲ್
ಬೆಳಗಾವಿ: ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಆದರೆ ದುರಾಸೆ ಇಲ್ಲ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಐದು ವರ್ಷ ಅವರೇ ಮುಂದುವರಿಯಲಿದ್ದಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಡಾ ಪ್ರಕರಣದ ವಿಷಯದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಹೀಗಾಗಿ ಯಾರೂ ಈ ಗಾದಿಯ ಮೇಲೆ ಟವಲ್ ಹಾಕುವ ಪ್ರಮೇಯವೇ ಬರುವುದಿಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿಯೇ ಇಲ್ಲ ಎಂದ ಮೇಲೆ ಅದರ ಮೇಲೆ ಆಸೆ ಪಡುವ ಪ್ರಶ್ನೆಯೇ ಇಲ್ಲ ಎಂದರು.