ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರ್ಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ ಸ್ಪರ್ಧಿಸಿರುವ 13 ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಫಲಿತಾಂಶದ ಪೂರ್ಣ ಚಿತ್ರಣ ಮಧ್ಯಾಹ್ನದೊಳಗೆ ಲಭ್ಯವಾಗಲಿದೆ. ಸೋಮವಾರ ಬೆಳಗ್ಗೆ 8ಗಂಟೆಯಿಂದ ಮತಎಣಿಕೆ ಆರಂಭಗೊಂಡಿದ್ದು, ಹನ್ನೊಂದು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಪ್ರತಿಷ್ಠಿತ ಕಣವಾಗಿದ್ದ ಹೊಸಕೋಟೆ ಹಾಗೂ ಹುಣಸೂರಿನಲ್ಲಿ ಬಿಜೆಪಿಯ ಅನರ್ಹ ಶಾಸಕರು ತೀವ್ರ ಹಿನ್ನಡೆ ಕಂಡಿದ್ದಾರೆ.
ಹುಣಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ್ 7633 ಮತಗಳ ಮುನ್ನಡೆ ಸಾಧಿಸಿದ್ದು, ಹಳ್ಳಿಹಕ್ಕಿ, ಬಿಜೆಪಿ ಅಭ್ಯರ್ಥಿ ವಿಶ್ವನಾಥ್ 11 ಸಾವಿರ ಮತಗಳ ಅಂತರದಿಂದ ಹಿನ್ನಡೆ ಅನುಭವಿಸುವ ಮೂಲಕ ಸೋಲಿನತ್ತ ಮುಖಮಾಡಿದ್ದಾರೆ.
ಮತ್ತೊಂದೆಡೆ ಹೊಸಕೋಟೆಯಲ್ಲಿ 3ನೇ ಸುತ್ತಿನಲ್ಲೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ 6,944 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ಎಂಟಿಬಿ ನಾಗರಾಜ್ ಹಿನ್ನಡೆ ಅನುಭವಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂಟಿಬಿ ವಿರುದ್ಧ ಶರದ್ ಬಚ್ಚೇಗೌಡ ಕೇವಲ ಮೂರು ಮತಗಳ ಅಂತರದಿಂದ ಪರಾಜಯಗೊಂಡಿದ್ದರು.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿಯಿಂದ ಸ್ಪರ್ಧಿಸಿದ್ದು, ಶರತ್ ಬಚ್ಚೇಗೌಡ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಶರತ್ ಬಚ್ಚೇಗೌಡಗೆ ಸಂಸದ ಬಚ್ಚೇಗೌಡರು ರಹಸ್ಯವಾಗಿ ಬೆಂಬಲ ನೀಡಿರುವುದಾಗಿ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದರು.