ಬೆಂಗಳೂರು: ರಾಜ್ಯದ ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಚುನಾವಣೆ ಕಣ ರಂಗೇರಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಮೂರೂ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಸಚಿವ ಸಂಪುಟ ಸದಸ್ಯರು ಮೂರೂ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಸೋಮವಾರ ಶಿಗ್ಗಾಂವಿಯಲ್ಲಿ ಬಿರುಸಿನ ಪ್ರಚಾರ ನಡೆಸಿ, ನಾನು ಅಧಿಕಾರದಲ್ಲಿ ಮುಂದುವರಿಯಬೇಕಾದರೆ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲ್ಲಬೇಕೆಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ಅಜ್ಜನೂ ಮುಖ್ಯಮಂತ್ರಿಯಾಗಿ, ಅಪ್ಪನೂ ಮುಖ್ಯಮಂತ್ರಿ ಆಗಿದ್ದವರ ಮಗ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಸಾಮಾನ್ಯ ಕುಟುಂಬದ ಪಠಾಣ್ ಕಣದಲ್ಲಿದ್ದಾರೆ, ಅವರನ್ನು ಗೆಲ್ಲಿಸಬೇಕು ಎಂದರು.
ಡಿ.ಕೆ. ಶಿವಕುಮಾರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿ, ನಿನ್ನನ್ನು ನಂಬಿ ಮತನೀಡಿ ಮುಖ್ಯಮಂತ್ರಿ ಮಾಡಿದ ಚನ್ನಪಟ್ಟಣ ಜನರ ಕೈ ಬಿಟ್ಟು ಮಂಡ್ಯಕ್ಕೆ ಹೋಗಿರುವ ಕುಮಾರಣ್ಣ, ಈಗ ಮತ್ತೆ ಬಂದು ಮತ ಕೇಳುತ್ತಿದ್ದೀಯಲ್ಲಾ, ನಿನಗೆ ಮತ ಕೇಳುವ ಹಕ್ಕಿದೆಯಾ? ಎಂದು ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿಗಳ ಪರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಡೂರಲ್ಲಿ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪುತ್ರ ಭರತ್ ಬೊಮ್ಮಾಯಿ ಪರ ಶಿಗ್ಗಾವಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ, ಪುತ್ರ, ನಿಖಿಲ್ ಪರ ಪ್ರಚಾರ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅಧರ್ಮಿ ಕಾಂಗ್ರೆಸ್‌ಗೆ ಸೋಲು ಖಚಿತ, ನಿಖಿಲ್ ಅಭಿಮನ್ಯುವಲ್ಲ, ಅರ್ಜುನ. ಮೈತ್ರಿ ಪಕ್ಷಗಳ ಕಾರ್ಯಕರ್ತರು ಕೃಷ್ಣನಂತೆ ನಿಖಿಲ್ ಜತೆ ನಿಂತಿದ್ದಾರೆ, ಈ ಚುನಾವಣೆ ಧರ್ಮ-ಅಧರ್ಮದ ಮಧ್ಯೆ ನಡೆಯುತ್ತಿರುವ ಯುದ್ಧವಾಗಿದೆ ಎಂದು ಹೇಳಿದರು. ಇನ್ನು ಕೇಂದ್ರ ಸಚಿವ ವಿ. ಸೋಮಣ್ಣ ಎನ್‌ಡಿಎ ಅಭ್ಯರ್ಥಿ ನಿಖೀಲ್ ಪರ ಪ್ರಚಾರ ನಡೆಸಿದರು. ನಿಖಿಲ್ ಪತ್ನಿ ರೇವತಿ ಅವರು ಚನ್ನಪಟ್ಟಣದ ವಿವಿಧ ಕಡೆ ತೆರಳಿ ಪತಿ ನಿಖಿಲ್ ಪರ ಮತಯಾಚಿಸಿದರು.
“ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಜತೆಗೆ ರಾಜ್ಯದ ವಿಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸುವಂತೆ ಸ್ಥಳೀಯ ಮತದಾರರು ಮನವಿ ಮಾಡಿದರೂ ಕೇಂದ್ರ ಸಚಿವರಾಗಬೇಕೆಂಬ ಆಸೆಯಿಂದ ಮಂಡ್ಯ ಸಂಸದ ಸ್ಥಾನದತ್ತ ಪಲಾಯನ ಮಾಡಿದ ವ್ಯಕ್ತಿ ಎಚ್.ಡಿ. ಕುಮಾರಸ್ವಾಮಿ. ಮಂಡ್ಯ ಮತ್ತು ರಾಮನಗರದಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಜನರು ಯಾವುದೇ ಕಾರಣಕ್ಕೂ ಒಪ್ಪಲಾರರು.” –
ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ