Advertisement

By-Election; ಶಿಗ್ಗಾವಿಗೆ ಭರತ್, ಸಂಡೂರಿಗೆ ಬಂಗಾರು ಹನುಮಂತು: ಬಿಜೆಪಿ ಘೋಷಣೆ

08:29 PM Oct 19, 2024 | Team Udayavani |

 ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಶನಿವಾರ(ಅ19) ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ಶಿಗ್ಗಾವಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿದೆ.

Advertisement

ಸಂಡೂರು ಎಸ್ ಟಿ ಮೀಸಲು ಕ್ಷೇತ್ರಕ್ಕೆ ಬಂಗಾರು ಹನುಮಂತು ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಲವು ಆಕಾಂಕ್ಷಿಗಳ ನಡುವೆ ಹನುಮಂತು ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಹನುಮಂತು ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದಾರೆ.

ಜಿದ್ದಾಜಿದ್ದಿನ ಕಣವಾಗಿರುವ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯ ಘೋಷಣೆ ಬಿಜೆಪಿ ಮಾಡಿಲ್ಲ, ಹೀಗಾಗಿ ಮೈತ್ರಿ ವಿಚಾರದಲ್ಲಿ ಕಗ್ಗಂಟಾಗಿರುವ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ.

Advertisement

ಬಸವರಾಜ್ ಬೊಮ್ಮಾಯಿ, ಇ. ತುಕಾರಾಂ, ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಮೂರು ಕ್ಷೇತ್ರಗಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಾಗಿದೆ.

ಶಿಗ್ಗಾವಿಯಲ್ಲಿ ಹಲವು ಆಕಾಂಕ್ಷಿಗಳಿದ್ದರೂ ಕ್ಷೇತ್ರದ ಹಿಡಿತ ಸಂಪೂರ್ಣವಾಗಿ ಬಸವರಾಜ್ ಬೊಮ್ಮಾಯಿ ಅವರ ಕೈಯಲ್ಲಿ ಇದೆ. ಪುತ್ರ ಭರತ್ ಕೂಡ ಕ್ಷೇತ್ರದಲ್ಲಿ ಪರಿಚಿತ ಮುಖವಾಗಿದ್ದು ಟಿಕೆಟ್ ಪಡೆಯಲು ಮುಖ್ಯ ಕಾರಣವಾಗಿದೆ. ಬೇರೊಬ್ಬ ಆಕಾಂಕ್ಷಿಗೆ ಟಿಕೆಟ್ ನೀಡಿದರೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರ ಹಾಕಿ ಎಲ್ಲರನ್ನೂ ಒಮ್ಮತದಿಂದ ಕೊಂಡೊಯ್ಯಬಲ್ಲ ಭರತ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದರೂ ಕೇಂದ್ರ ಸಂಪುಟಕ್ಕೆ ಅವರನ್ನು ಪರಿಗಣಿಸಿರಲಿಲ್ಲ ಅನ್ನುವುದನ್ನೂ ಗಮನಿಸಬಹುದು. ಬಸವರಾಜ್ ಬೊಮ್ಮಾಯಿ ಅವರೇ ನನ್ನ ಪುತ್ರ ಟಿಕೆಟ್ ಆಕಾಂಕ್ಷಿ ಅಲ್ಲ, ಉದ್ಯಮ ನೋಡಿಕೊಂಡಿರುತ್ತಾನೆ ಎಂದಿದ್ದರೂ ಪಕ್ಷ ಟಿಕೆಟ್ ನೀಡಿದೆ.

ಸಂಡೂರಿನ ಚುನಾವಣೆ ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದ್ದು, ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ರಣತಂತ್ರ ಮಾಡಿದೆ. ವಾಲ್ಮೀಕಿ ನಿಗಮದ ಹಗರಣವನ್ನೇ ಪ್ರಮುಖ ಅಸ್ತ್ರವನ್ನಾಗಿ ಈಗಾಗಲೇ ಪ್ರಚಾರಕ್ಕೆ ಇಳಿದಿದೆ. ಈ ನಡುವೆ ಮುಡಾ ವಿಚಾರವನ್ನು ಪ್ರಚಾರಕ್ಕೆ ಪ್ರಮುಖ ಅಸ್ತ್ರ ಮಾಡಿಕೊಳ್ಳಲಾಗಿದೆ. ಜನಾರ್ದನ ರೆಡ್ಡಿ ಕೂಡ ಬಿಜೆಪಿ ಪರ ಹೋರಾಟ ನಡೆಸಲು ಸಜ್ಜಾಗಿದ್ದಾರೆ.

ನವೆಂಬರ್ 13 ರಂದು ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next