Advertisement

ಉಪ ಚುನಾವಣೆ: ಮೂರೂ ಪಕ್ಷಗಳಿಗೆ ಸತ್ವಪರೀಕ್ಷೆ

10:52 PM Sep 28, 2021 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿ ರುವ ಬೆನ್ನಲ್ಲೇ ಎದುರಾಗಿರುವ ಅಲ್ಪಕಾಲಿಕ ಎರಡು ಕ್ಷೇತ್ರಗಳ ಉಪ ಚುನಾ
ವಣೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.

Advertisement

ಹಾನಗಲ್‌ ಹಾಗೂ ಸಿಂಧಗಿ ಕ್ಷೇತ್ರಗಳ ಉಪ ಚುನಾವಣೆ ವಿಶೇಷವಾಗಿ ಸಿಎಂ ಬೊಮ್ಮಾಯಿ ಅವರಿಗೆ ಸತ್ವಪರೀಕ್ಷೆ ಎಂದೇ ಹೇಳ ಬಹುದು. ಇನ್ನು ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೂಡ ಈ ಚುನಾವಣೆಯನ್ನು ಸವಾ ಲಾಗಿಯೇ ಸ್ವೀಕರಿಸಿವೆ.

ಬಣ ರಾಜಕೀಯ, ಜಾತಿ ರಾಜಕೀಯ ಹಾಗೂ ಮುಂದಿನ ಸಿಎಂ ಯಾರು ಎಂಬ ಗುಂಗಿನಿಂದ ಇನ್ನೂ ಹೊರಬಾರದ ಕಾಂಗ್ರೆಸ್‌ಗೆ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಅಸ್ತಿತ್ವ ಸಾಬೀತುಪಡಿಸಬೇಕಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಬ್ಬರಿಗೂ ಉಪ ಚುನಾವಣೆ ಪ್ರತಿಷ್ಠೆಯೇ ಆಗಿದೆ. ಸಿಂದಗಿಯಲ್ಲಿ ಆಪರೇಷನ್‌ ಹಸ್ತ ಕಾರ್ಯಾಚರಣೆ ಮೂಲಕ ಜೆಡಿಎಸ್‌ನ ಮಾಜಿ ಸಚಿವ ಎಂ.ಸಿ.ಮನಗೊಳಿ ಪುತ್ರ ಅಶೋಕ್‌ ಮನಗೊಳಿ ಕರೆತಂದು ಟಿಕೆಟ್‌ ಭರವಸೆ ನೀಡಲಾಗಿದೆ.

ಜೆಡಿಎಸ್‌ನದ್ದೇ ಆತಂಕ
ಎರಡು ಕ್ಷೇತ್ರಗಳ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ನ ಮತ ವಿಭಜನೆ ಬಗ್ಗೆಯೇ ಆತಂಕವಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿ ಟಕ್ಕರ್‌ ಕೊಟ್ಟಿದ್ದ ಜೆಡಿಎಸ್‌ ಇದೀಗ ಹಾನಗಲ್‌ನಲ್ಲೂ ಮುಸ್ಲಿಂ ಅಭ್ಯರ್ಥಿ ಘೋಷಿಸಿದೆ. ಇದು ಕೈ ನಾಯಕರ ನಿದ್ದೆಗೆಡಿಸಿದೆ.
ಟಿಕೆಟ್‌ಗಾಗಿ ಪೈಪೋಟಿ ಹಾನಗಲ್‌ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ:ಡಿಜಿಟಲ್‌ ಇಂಡಿಯಾ ಮೇಲ್ಪರ್ಜೆಗೆ?

Advertisement

ಉದಾಸಿ ಕುಟುಂಬದವರಿಗೆ ಟಿಕೆಟ್‌ ನೀಡದೇ ಹೋದರೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಲು ವಿಜಯೇಂದ್ರ ಪ್ರಯತ್ನ ನಡೆಸುತ್ತಿರುವುದರಿಂದ, ಕೊನೇ ಘಳಿಗೆಯಲ್ಲಿ ಸ್ಪರ್ಧೆಗಿಳಿದರೂ ಅಚ್ಚರಿಯಿಲ್ಲ.

ಜೆಡಿಎಸ್‌ ರಣತಂತ್ರದಿಂದ ಕೈಗೆ ಶಾಕ್‌?
ಜೆಡಿಎಸ್‌ ಕೊನೇ ಕ್ಷಣದಲ್ಲಿ ತನ್ನ ರಣತಂತ್ರ ಬದಲಿಸಿದ್ದು, ಎದುರಾಳಿ ಗಳಿಗೆ (ಕಾಂಗ್ರೆಸ್‌ಗೆ ಹೆಚ್ಚು) ಸಣ್ಣ ಶಾಕ್‌’ ನೀಡಿದೆ. ಮೇಲ್ನೋಟಕ್ಕೆ ಇದು ಸಮಾನ ಅಂತರ ಕಾಯ್ದುಕೊಳ್ಳುವ ನಡೆಯಂತೆ ಕಂಡರೂ, ಜೆಡಿಎಸ್‌ನ ಈ ತೀರ್ಮಾನವು ಕಾಂಗ್ರೆಸ್‌ಗೆ ಒಳಏಟು ನೀಡುವ ಸಾಧ್ಯತೆಗಳೇ ಹೆಚ್ಚು. ಸಿಂದಗಿಯಲ್ಲಿ ಅಶೋಕ ಮನಗೂಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ನಿರ್ಧರಿಸಿದ ಬಳಿಕ ಮತ್ತೆ ನಿರ್ಧಾರ ಬದಲಿಸಿದ ಜೆಡಿಎಸ್‌, ಸ್ಪರ್ಧೆಗಿಳಿಯುವುದಾಗಿ ಪ್ರಕಟಿಸಿದೆ. ಇದು ತಮ್ಮ ಅಭ್ಯರ್ಥಿಯನ್ನು ಕರೆದು ಕೊಂಡು ಹೋಗಿರುವ ಕಾಂಗ್ರೆಸ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತಂತ್ರವೂ ಆಗಿದೆ. ಆದರೆ, ಯಾವ ಅಭ್ಯರ್ಥಿ ಕಣಕ್ಕಿಳಿಸಲಿದೆ ಎಂಬುದು ನಿಗೂಢ. ಜೆಡಿಎಸ್‌ನ ಈ ನಡೆ ಪರೋಕ್ಷವಾಗಿ ಮತ ವಿಭಜನೆಯಿಂದ ಬಿಜೆಪಿಗೆ ಅನುಕೂಲ ಆಗುವ ಸಾಧ್ಯತೆಗಳು ಹೆಚ್ಚಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next