ಬೆಂಗಳೂರು: ಉಪಚುನಾವಣೆಗೆ ರಾಜಕೀಯ ಪಕ್ಷಗಳು ಅಖಾಡಕ್ಕಿಳಿಯುತ್ತಿದ್ದಂತೆ, ಚುನಾವಣಾ ನೀತಿ ಸಂಹಿತೆ ಜಾರಿ ಜಾಲವನ್ನು ಬಿಗಿಗೊಳಿಸಲು ಚುನಾವಣಾ ಆಯೋಗ ಕಾರ್ಯರಂಗಕ್ಕಿಳಿದಿದೆ. ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿ ಹಾಗೂ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಆಯೋಗವು ವಿವಿಧ ತಂಡಗಳನ್ನು ರಚಿಸಿದೆ. ಅದರಂತೆ, 168 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 401 ಸ್ಟಾಟಿಕ್ ಸರ್ವಲೈನ್ಸ್ ತಂಡಗಳು, 58 ಅಬಕಾರಿ ತಂಡಗಳು ಮತ್ತು 18 ವಾಣಿಜ್ಯ ತೆರಿಗೆ ತಂಡಗಳು ನೀತಿ ಸಂಹಿತೆ ಜಾರಿ ಕಾರ್ಯದಲ್ಲಿ ತೊಡಗಿಕೊಂಡಿವೆ.
ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇಲ್ಲಿವರೆಗೆ ನೀತಿ ಸಂಹಿತೆ ಜಾರಿ ತಂಡಗಳು, ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು 86.69 ಲಕ್ಷ ನಗದು ಹಾಗೂ 69 ಸಾವಿರ ಮೊತ್ತದ ಅಕ್ರಮ ಮದ್ಯ ಸೇರಿ ಒಟ್ಟು 94.69 ಲಕ್ಷ ಅಕ್ರಮ ಹಣ ಜಪ್ತಿ ಮಾಡಿದ್ದಾರೆ. ಇಲ್ಲಿವರೆಗೆ 17 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಳೆದ 24 ಗಂಟೆಗಳಲ್ಲಿ ನೀತಿ ಸಂಹಿತೆ ಜಾರಿ ತಂಡಗಳು 8 ಲಕ್ಷ ರೂ. ನಗದು, 7 ಸಾವಿರ ಮೊತ್ತದ ಅಕ್ರಮ ಮದ್ಯ ವಶಕ್ಕೆ ಪಡೆದುಕೊಂಡಿವೆ.
ಅಬಕಾರಿ ಇಲಾಖೆಯ ಅಧಿಕಾರಿಗಳು 44 ಸಾವಿರ ರೂ. ಮೊತ್ತದ 91.52 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ. ಅಬಕಾರಿ ಅಧಿಕಾರಿಗಳು ಇಲ್ಲಿವರೆಗೆ 41 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿ ತಂಡಗಳು ಸರ್ಕಾರಿ ಕಟ್ಟಡಗಳ ಮೇಲಿನ 1,527 ಗೋಡೆ ಬರಹ, 7,963 ಭಿತ್ತಿಪತ್ರ ಹಾಗೂ 2,359 ಬ್ಯಾನರ್‌ಗಳನ್ನು ತೆರವುಗೊಳಿಸಿವೆ. ಜೊತೆಗೆ ಖಾಸಗಿ ಆಸ್ತಿಗಳ ಮೇಲಿದ್ದ 835 ಗೋಡೆ ಬರಹ, 1,352 ಭಿತ್ತಿಪತ್ರಗಳು ಹಾಗೂ 1,462 ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಆರ್‌ಪಿಸಿ ಅಡಿಯಲ್ಲಿ 213 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಡಿ 168 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ. ಕಳೆದ 24 ಗಂಟೆಗಳಲ್ಲಿ 280 ಸೇರಿದಂತೆ ಇಲ್ಲಿವರೆಗೆ 812 ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿದೆ. ಇಲ್ಲಿವರೆಗೆ ಒಟ್ಟು 715 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ 127 ನಾಕಾಗಳನ್ನು ಜಾರಿಗೊಳಿಸಲಾಗಿದೆ. 9,274 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.