ಬೆಂಗಳೂರು: ರಾಜಧಾನಿ ಬೆಂಗಳೂರಿನ ಮತದಾರರು ಹಕ್ಕು ಚಲಾವಣೆಯಲ್ಲಿ ಉತ್ಸಾಹ ತೋರುವುದಿಲ್ಲ ಎಂಬ “ಕುಪ್ರಸಿದ್ಧಿ’ ಆರ್.ಆರ್. ನಗರ ವಿಧಾನಸಭೆಯ ಉಪ ಚುನಾವಣೆಯಲ್ಲಿ ಪುನರಾವರ್ತನೆಯಾಗಿದ್ದು, ಶಿರಾ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಉತ್ಸಾಹದ ನಾಗಲೋಟ ಕಂಡು ಬಂದಿದೆ.
ಆರ್.ಆರ್ ನಗರದಲ್ಲಿ ಶೇ.45.24 ರಷ್ಟು ಮತದಾನವಾಗಿದ್ದರೆ, ಶಿರಾ ಕ್ಷೇತ್ರದಲ್ಲಿ ಶೇ.82.31 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಆರ್.ಆರ್. ನಗರದಲ್ಲಿ ಶೇ. 54.38ರಷ್ಟು ಮತದಾನವಾಗಿದ್ದರೆ, ಶಿರಾ ಕ್ಷೇತ್ರದಲ್ಲಿ ಶೇ.84.77ರಷ್ಟು ಮತ ಚಲಾವಣೆ ಆಗಿತ್ತು.
ಬೆಳಿಗ್ಗೆಯಿಂದಲೇ ಆರ್.ಆರ್. ನಗರದಲ್ಲಿ ಮತದಾನದಲ್ಲಿ ನೀರಸತೆ ಕಂಡು ಬಂದರೆ, ಶಿರಾ ಕ್ಷೇತ್ರದಲ್ಲಿ ಮತದಾರ ಉತ್ಸಾಹದಿಂದಲೇ ಮತಗಟ್ಟೆಗಳತ್ತ ಮುಖ ಮಾಡಿದ್ದಾನೆ. ಆರ್.ಆರ್. ನಗರದಲ್ಲಿ ಒಟ್ಟು 4.62 ಲಕ್ಷ ಮತದಾರರ ಪೈಕಿ 2.09 ಲಕ್ಷ ಮಂದಿ ಮಾತ್ರ ಮತದಾನ ಮಾಡಿದ್ದಾರೆ. ಅದೇ ರೀತಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 2.15 ಲಕ್ಷ ಮತದಾರರ ಪೈಕಿ 1.82 ಲಕ್ಷ ಮಂದಿ ಮತ ಚಲಾಯಿಸಿದ್ದಾರೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಆರ್.ಆರ್. ನಗರದಲ್ಲಿ 4.71 ಲಕ್ಷ ಮತದಾರರ ಪೈಕಿ 2.53 ಲಕ್ಷ ಮತದಾರರು ಮತದಾನ ಮಾಡಿದ್ದರು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 2.12 ಲಕ್ಷ ಮತದಾರರಲ್ಲಿ 1.79 ಲಕ್ಷ ಮಂದಿ ಮತ ಚಲಾಯಿಸಿದ್ದರು.
ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದರೂ ಆರ್.ಆರ್. ನಗರದಲ್ಲಿ ಅರ್ಧದಷ್ಟು ಮತದಾರರು ಮತಗಟ್ಟೆಗಳಿಗೆ ಬಂದಿಲ್ಲ. ಒಟ್ಟು 4.62 ಲಕ್ಷ ಅರ್ಹ ಮತದಾರರ ಪೈಕಿ ಕೇವಲ 2.09 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ನವೆಂಬರ್ 10 ಕ್ಕೆ ಮತ ಎಣಿಕೆ:
ಎರಡು ಕ್ಷೇತ್ರಗಳ ಉಪ ಚುನಾವಣೆಗೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೂ ರಾಜಕೀಯ ನಾಯಕರ ಸೋಲು ಗೆಲುವಿನ ಲೆಕ್ಕಾಚಾರ ಅಭ್ಯರ್ಥಿಗಳಲ್ಲಿ ನಿರೀಕ್ಷೆ, ಆತಂಕ ಮುಂದುವರೆಯಲಿದೆ.