ಎಚ್.ಡಿ.ಕೋಟೆ: ಸರ್ವೋಚ್ಚ ನ್ಯಾಯಾಲಯ ಬಿ.ಕೆ. ಪವಿತ್ರ ಪ್ರಕರಣ ದಲ್ಲಿ ರಾಜ್ಯ ಸರ್ಕಾರದ 2002ರ ಬಡ್ತಿ ಮೀಸಲಾತಿ ಕಾನೂನು ರದ್ದುಗೊಳಿಸಿರುವ ಕ್ರಮವನ್ನು ವಿರೋಧಿಸಿ ತಾಲೂಕು ಬಹುಜನ ವಿದ್ಯಾರ್ಥಿ ಸಂಘದ ಕಾರ್ಯ ಕರ್ತರು ಶಾಸಕ ಎಸ್. ಚಿಕ್ಕಮಾದು ಮನೆಯ ಮುಂದೆ ಧರಣಿ ನಡೆಸಿದರು.
ಸರ್ವೋಚ್ಚ ನ್ಯಾಯಾಲಯದ ಅದೇಶದಿಂದ ಸುಮಾರು 16 ಸಾವಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತ ರಾಗುತ್ತಾರೆ. ಅಲ್ಲದೆ ಈ ಆದೇಶ ಸಂವಿಧಾನ ಬದ್ಧ ಹಕ್ಕು ಮೊಟಕು ಗೊಳಿಸಿದಂತಾಗುತ್ತದೆ. ಹಾಗಾಗಿ ಶಾಸಕರು ಮುಂದಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿ ಸುಪ್ರೀಂ ಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಿ ಬಡ್ತಿ ಮೀಸಲಾತಿ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಜಲ್ಲಿಕಟ್ಟು, ಕಂಬಳ ಮೊದಲಾದ ಅಪಾಯಕಾರಿ ಊಳಿಗಮಾನ್ಯ ಕ್ರೀಡೆಗಳ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಜೆಟ್ ಅಧಿವೇಶನದಲ್ಲಿ ಬಡ್ತಿ ಮೀಸಲಾತಿ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಲು ಶಾಸಕರು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಮೀಸಲಾತಿ ಭಿಕ್ಷೆಯಲ್ಲ ಸಮಾನತೆಯ ಸಾಧನ, ಬಡ್ತಿ ಮೀಸಲಾತಿಯನ್ನು ಕೂಡಲೆ ಜಾರಿಗೊಳಿಸಿ ಎಂದು ಘೋಷಣೆ ಕೂಗಿದರು.
ಪ್ರತಿಭಟನಾಕಾರರು ಖುದ್ದು ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸುವ ಉದ್ದೇಶದಿಂದ ಶಾಸಕರ ಮನೆ ಮುಂದೆ ಧರಣಿ ನಡೆಸುತಿದ್ದರು. ಆದರೆ ಶಾಸಕರು ಅನ್ಯಕಾರ್ಯನಿಮಿತ್ತ ಹೊರಗಡೆ ಹೋಗಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಬೀಗ ಹಾಕಿದ ಮನೆ ಮುಂದೆಯೇ ಬಿವಿಎಸ್ ಕಾರ್ಯಕರ್ತರು ಧರಣಿ ನಡೆಸುತ್ತಿರುವ ಮಾಹಿತಿ ಪಡೆದ ಶಾಸಕ ಚಿಕ್ಕಮಾದು ಕಂದಾಯ ಅಧಿಕಾರಿಗಳನ್ನು ಮನೆ ಬಳಿಗೆ ಕಳುಹಿಸಿ ಮನವಿ ಪತ್ರ ಸ್ವೀಕರಿಸುವಂತೆ ಸೂಚನೆ ನೀಡಿದ್ದರು.
ಪ್ರತಿಭಟನಾಕಾರರು ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಉಮೇಶ್, ಸಂಯೋಜಕ ಸೋಮಶೇಖರ್, ಚಿಕ್ಕದೇವಪ್ಪ, ನಂಜಪ್ಪ, ಮಹದೇವರಾಜು, ಸುರೇಶ್‌ಬಾಬು, ಜೈಭೀಮ್ ಯುವ ಸೇನೆ ಸಂಘದ ಮಲ್ಲಿಕಾರ್ಜುನ, ಶಿವಕುಮಾರ್, ರಾಜು, ಭೀಮನಹಳ್ಳಿ ಸೋಮೇಶ್, ಮಲಾರ ರವಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.