Advertisement

ಇನ್ನಷ್ಟು ತೊಗರಿ ಖರೀದಿ ಕೇಂದ್ರ ಸ್ಥಾಪನೆ

03:05 PM Mar 11, 2017 | Team Udayavani |

ಕಲಬುರಗಿ: ದಾಖಲೆಯಾಗಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಯಾಗುತ್ತಿದೆಯಲ್ಲದೇ ಇದೇ ಮೊದಲ ಬಾರಿಗೆ ವ್ಯವಸಾಯ ಸೇವಾ ಸಹಕಾರ (ವಿಎಸ್‌ಎಸ್‌ಎನ್‌) ಸಂಘಗಳ ಮೂಲಕ ಖರೀದಿ ಮಾಡಲಾಗುತ್ತಿದ್ದು, ಅಗತ್ಯ ಬಿದ್ದಲ್ಲಿ ಇನ್ನಷ್ಟು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. 

Advertisement

ಜಿಲ್ಲೆಯ ಫರಹಾಬಾದ್‌ ಹೋಬಳಿಯಲ್ಲಿ ಕೃಷಿ ಹೊಂಡ ನಿರ್ಮಾಣ ಕಾಮಗಾರಿ ವೀಕ್ಷಿಸಿ ನಂತರನಡೆದ ಕೃಷಿ ಯಂತ್ರಧಾರೆ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ 52 ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಚೀಲಗಳ ಕೊರತೆಯಿಂದ ಮೂರ್‍ನಾಲ್ಕು ದಿನಗಳ ಕಾಲ ಸ್ವಲ್ಪ ಅಡಚಣೆ ಉಂಟಾಗಿತ್ತು.

ಈಗ ಕೊಲ್ಕತ್ತಾದಿಂದ ಚೀಲಗಳು ಬರುತ್ತಿವೆ. ಹೊಸದಾಗಿ 22 ವ್ಯವಸಾಯ ಸೇವೆ ಸಹಕಾರ ಸಂಘಗಳಲ್ಲಿ ತೊಗರಿ ಖರೀದಿಮಾಡಲು ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಬೇಡಿಕೆ ಅನುಗುಣವಾಗಿ ಇನ್ನಷ್ಟು ವಿಎಸ್‌ಎಸ್‌ ಎನ್‌ಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನುತೆರೆಯಲಾಗುವುದು ಪ್ರಕಟಿಸಿದರು. 

ತೊಗರಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಿ ರೈತರದ್ದೇ ತೊಗರಿ ಮಾರಾಟವಾಗಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತನದ್ದೇ ಆರ್‌ಟಿಸಿ ಪಹಣಿ ಪತ್ರ, ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಗಳನ್ನು ಪಡೆಯಲಾಗುತ್ತಿದೆ. ಖರೀದಿ ಮೊತ್ತವನ್ನು ಆರ್‌ಟಿಜಿಎಸ್‌ ಮೂಲಕವೇ ಬ್ಯಾಂಕ್‌ ಖಾತೆಗೆಜಮಾ ಮಾಡಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದೆ.

ಇಷ್ಟಾದರೂ ರೈತರು ಮಧ್ಯವರ್ತಿಗಳ ಜತೆ ಕೈ ಜೋಡಿಸಿದರೆ ಏನು ಮಾಡಲು ಸಾಧ್ಯ. ಶೇ. 90ರಷ್ಟು ಸುಸೂತ್ರವಾಗಿ ಖರೀದಿ ಪ್ರಕ್ರಿಯೆ ನಡೆದಿದೆ. ಶೇ. 10 ರಷ್ಟು ಮಾತ್ರ ಸಮಸ್ಯೆ ಇದೆ ಎನ್ನುವುದು ತಮ್ಮ ಗಮನಕ್ಕೂ ಬಂದಿದೆ. ಹೆಚ್ಚಿನ ಖರೀದಿ ಕೇಂದ್ರಗಳ ಮೂಲಕ ಇದನ್ನೂ ಸಹ ತೊಲಗಿಸಬಹುದಾಗಿದೆ. ವಾರ ಇಲ್ಲವೇ 12 ದಿನದೊಳಗೆ ರೈತರಿಗೆ ಹಣ ಪಾವತಿ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

ವಿಸ್ತರಣೆ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಾಡುವುದನ್ನು ವಿಸ್ತರಿಸುವಂತೆ ಕೋರಿ ರಾಜ್ಯದ ಅಧಿಕಾರಿಗಳು ಕೇಂದ್ರದ ಬಳಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಸಭೆ ನಡೆಯುತ್ತಿದೆ. ಮಾರ್ಚ್‌ 15 ಇರುವುದನ್ನು ವಿಸ್ತರಿಸುವಂತೆ ಕೋರಲಾಗಿದೆ.ದಿನಾಂಕ ವಿಸ್ತರಣೆಯಾಗುವ ಬಗ್ಗೆ ಸ್ಪಷ್ಟ ಭರವಸೆಯಿದೆ ಎಂದರು. 

ರೈತರು ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವಕೇಂದ್ರಗಳನ್ನು ಆರಂಭಿಸಲಾಗಿದೆ. ತಲಾ ಕೇಂದ್ರದಲ್ಲಿ 75 ಲಕ್ಷ ರೂ.ಗೂ ಹೆಚ್ಚು ಮೊತ್ತದ ಕೃಷಿ ಉಪಕರಣಗಳಿವೆ. ರೈತರು ಹೆಸರು ನೋಂದಾಯಿಸಿ ಬಾಡಿಗೆ ಮೇಲೆ ಪಡೆಯಬಹುದಾಗಿದೆ.

ಕೃಷಿ ಹೊಂಡಗಳು ರೈತರಿಗೆ ವರದಾನವಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ರೈತರಲ್ಲಿ ವಿನಂತಿಸಿದರು.ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ಮಾಲೀಕಯ್ಯ ವಿ. ಗುತ್ತೇದಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾಸಿದ್ದು ಸಿರಸಗಿ,

ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್‌ ಯಾಕಾಪುರ, ಜಿ.ಪಂ ಸದಸ್ಯ ದಿಲೀಪ ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪುರ, ತಾಲೂಕಾ ಪಂಚಾಯಿತಿ ಅಧ್ಯಕ್ಷ ಸಜ್ಜನಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ, ತೊಗರಿ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರತೀಂದ್ರನಾಥ ಸೂಗುರ ಹಾಗೂ ಮುಂತಾದವರಿದ್ದರು. 

ಇದೇ ಸಂದರ್ಭದಲ್ಲಿ ಫರಹತಾಬಾದ್‌ ತೊಗರಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ರೈತರಿಗೆ ಯಾವುದೇ ನಿಟ್ಟಿನಲ್ಲಿ ಶೋಷಣೆಯಾಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರಲ್ಲದೇ ವಾರ ಇಲ್ಲವೇ 10 ದಿನದೊಳಗೆ ಹಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ರೈತರು ವಿವಿಧ ಸಮಸ್ಯೆಗಳನ್ನು ಸಚಿವರ ಎದುರು ನಿವೇದಿಸಿಕೊಂಡರು.  

Advertisement

Udayavani is now on Telegram. Click here to join our channel and stay updated with the latest news.

Next