ಬೆಂಗಳೂರು: ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಶೀಘ್ರದಲ್ಲೇ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಈ ಮೂಲಕ ಗ್ರಾಹಕರ ಮನೆಬಾಗಿಲಿಗೆ ಖಾದಿ ಉತ್ಪನ್ನಗಳು ಬರಲಿವೆ. ಈ ಸಂಬಂಧ ಫ್ಲಿಪ್‌ಕಾರ್ಟ್ ಸೇರಿ ಹಲವು ಆನ್‌ಲೈನ್ ಮಾರುಕಟ್ಟೆ ಕಂಪನಿಗಳ ಜತೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಗ್ರಾಹಕರು ಮೊಬೈಲ್‌ನಲ್ಲಿ ಬುಕಿಂಗ್ ಮಾಡಿದರೆ, ಮನೆ ಬಾಗಿಲಿಗೇ ಖಾದಿ ಉತ್ಪನ್ನಗಳು ಬರಲಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್. ನವೀನ್‌ಕುಮಾರ್, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮಾರುಕಟ್ಟೆ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕೂಡ ಈ ನಿಟ್ಟಿನಲ್ಲಿ ಮುಂದಾಗಿದೆ ಎಂದು ತಿಳಿಸಿದರು.
ಯುವಕರ ಆಕರ್ಷಣೆಗೆ 400 ಡಿಸೈನ್: ಈಗಾಗಲೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಜತೆ ಮಾತುಕತೆ ನಡೆಸಲಾಗಿದೆ. ಈ ಸಂಸ್ಥೆಯು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ 400 ವಿನ್ಯಾಸಗಳನ್ನು ಸಮೀಕ್ಷೆ ಮಾಡಿ, ಮಂಡಳಿಗೆ ನೀಡಿದೆ. ಖಾದಿ ಉತ್ಪನ್ನಗಳ ತಯಾರಕರಿಗೆ ಈ ವಿನ್ಯಾಸಗಳ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದ ಖಾದಿ ತನ್ನ ಸಾಂಪ್ರದಾಯಿಕ ವಿನ್ಯಾಸಗಳಿಂದ ಹೊರಬಂದು, ಯುವಪೀಳಿಗೆಯನ್ನು ಸೆಳೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಉತ್ತಮ ವ್ಯಾಪಾರ: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ಏಪ್ರಿಲ್ 24ರಂದು ಆರಂಭಗೊಂಡ ಖಾದಿ ಉತ್ಸವದಲ್ಲಿ ಈವರೆಗೆ 10 ಕೋಟಿ ರೂ. ವ್ಯಾಪಾರ-ವಹಿವಾಟು ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಂದನೆ ದೊರೆಯಲಿದೆ ಎಂದರು.
ಹೊರ ರಾಜ್ಯಗಳ 80 ಖಾದಿ ಮತ್ತು ಗ್ರಾಮೋದ್ಯೋಗ ಮಳಿಗೆಗಳು ಸೇರಿ ಒಟ್ಟಾರೆ 200 ಮಳಿಗೆಗಳು ಉತ್ಸವದಲ್ಲಿ ತಲೆಯೆತ್ತಿದ್ದು, 7.66 ಕೋಟಿ ಖಾದಿ ಮತ್ತು ಸುಮಾರು 30 ಲಕ್ಷ ರೂ. ಗ್ರಾಮೋದ್ಯೋಗ ಉತ್ಪನ್ನಗಳು ಮಾರಾಟ ಆಗಿವೆ. ವಾರಾಂತ್ಯದ ದಿನಗಳಲ್ಲಿ ವ್ಯಾಪಾರ ಹೆಚ್ಚಿದೆ. ಉತ್ಸವದಲ್ಲಿ ನೂಲು ತೆಗೆಯುವುದರಿಂದ ಹಿಡಿದು, ತಯಾರಿಕೆಯ ವಿವಿಧ ಹಂತಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ. ಇದರಿಂದ ಮಕ್ಕಳಿಗೆ ಖಾದಿ ತಯಾರಿಕೆ ಬಗ್ಗೆ ಅರಿವು ಮೂಡಲಿದೆ ಎಂದು ಹೇಳಿದರು.