ಚಾಮರಾಜನಗರ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ನಗರದಲ್ಲಿ ಗೌರಿ ಗಣೇಶ ಮೂರ್ತಿಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸುವ ಸಂಭ್ರಮ ಮನೆ ಮಾಡಿತ್ತು.
ನಗರದ ಅಗ್ರಹಾರ ಬೀದಿಯಲ್ಲಿರುವ ರಾಮಮಂದಿರದ ಎದುರು ಹಾಗೂ ರಥದ ಬೀದಿಯಲ್ಲಿ ಗಣೇಶ ಮೂರ್ತಿಗಳ ಮಾರಾಟ ನಡೆಯುತ್ತಿದ್ದು, ಭಕ್ತಾದಿಗಳು ತಮಗೆ ಬೇಕಾದ ರೀತಿಯ ಗಣೇಶ ಮೂರ್ತಿಯನ್ನು ಖರೀದಿಸುವಲ್ಲಿ ನಿರತರಾಗಿದ್ದರು. 50-100 ರೂ.ಗಳಿಂದ ಸಾವಿರಾರು ರೂ.ಗಳವೆರೆಗಿನ ಗಣೇಶ ಮೂರ್ತಿಗಳು ಮಾರಾಟವಾದವು.
ಮಣ್ಣಿನ ಗಣಪ ಖರೀದಿಗೆ ಹೆಚ್ಚು ಆಸಕ್ತಿ ತೋರದ ಜನ: ಪಿಒಪಿ ಗಣೇಶ ನಿಷೇಧ ಹಿನ್ನೆಲೆಯಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿತ್ತು. ತಯಾರಕರು ಮಣ್ಣಿನಿಂದ ಮಾಡಿ ಪರಿಸರ ಸ್ನೇಹಿ ಬಣ್ಣ ಹಾಕಿದ್ದರು. ಬಣ್ಣದ ಗಣೇಶನಿಗೆ ಬೇಡಿಕೆಯಿತ್ತು. ಮಣ್ಣಿನಿಂದ ಮಾಡಿ ಬಣ್ಣ ಹಚ್ಚದ ಮೂರ್ತಿಗಳನ್ನು ಕೊಳ್ಳಲು ಜನರು ಹೆಚ್ಚು ಆಸಕ್ತಿ ತೋರಿಸಲಿಲ್ಲ.
ತಮಗಿಷ್ಟವಾದ ಗಣೇಶ ಕೊಂಡೊಯ್ದರು: ಗ್ರಾಮಾಂತರ ಪ್ರದೇಶಗಳಿಂದ ಗೂಡ್ಸ್ ಆಟೋದಲ್ಲಿ ಬಂದ ಜನರು ತಮ್ಮ ಬೀದಿಗಳಲ್ಲಿ ಪ್ರತಿಷ್ಠಾಪಿಸಲು ದೊಡ್ಡ ದೊಡ್ಡ ಗಣಪನ ಮೂರ್ತಿಯನ್ನು ಕೊಳ್ಳಲು ಆಸಕ್ತಿ ತೋರಿದರು. ಮಾರಾಟಗಾರರಲ್ಲಿ ಚೌಕಾಶಿ ಮಾಡಿ, ತಮಗಿಷ್ಟವಾದ ಗಣೇಶನ ಮೂರ್ತಿಯನ್ನು ಕೊಂಡು ಆಟೋಗಳಲ್ಲಿ ಕೊಂಡೊಯ್ದರು.
ದರ ಏರಿಕೆ: ಹಬ್ಬದ ಅಂಗವಾಗಿ ಮಾರುಕಟ್ಟೆ ಹಾಗೂ ರಸ್ತೆ ಬದಿಯಲ್ಲಿ, ಬಾಳೆ ಕಂದು, ಮಾವಿನಸೊಪ್ಪು, ಕಬ್ಬಿನ ಜಲ್ಲೆ ಮಾರಾಟ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ದರ ಏರಿಕೆ ಕಂಡಿತ್ತು. ಮೀಟರ್ ಮಲ್ಲಿಗೆಗೆ 30 ರೂ. ಸೇವಂತಿಗೆ 50ರೂ. ಕನಕಾಂಬರ 50 ರೂ. ಮುಲ್ಲೆ 50 ರೂ. ಚೆಂಡುಮಲ್ಲಿಗೆ 50 ರೂ. ದರವಿತ್ತು. ಸೇಬು ಕೆಜಿಗೆ 100 ರಿಂದ 150, ರೂ. ಇದ್ದರೆ, ಏಲಕ್ಕಿ ಬಾಳೆ 80 ರೂ. ದಾಳಿಂಬೆ 80 ರಿಂದ 100 ರೂ. ಸೀಬೆ 60 ರೂ. ಮೂಸಂಬಿ 50 ರಿಂದ 60 ರೂ. ಕಿತ್ತಳೆ 80 ರೂ. ಬೇರಿಕಾಯಿ 40 ರಿಂದ 50 ರೂ. ಪಚ್ಚ ಬಾಳೆ 30 ರೂ. ದರವಿತ್ತು.
ಗೊಣಗುತ್ತಲೇ ಸಾಮಾಗ್ರಿ ಖರೀದಿಸಿದ ಜನತೆ: ಜನ ಸಾಮಾನ್ಯರು ಹೂವು ಪೂಜಾ ಸಾಮಗ್ರಿಗಳ ಬೆಲೆಗಳನ್ನು ಕೇಳಿ, ಇದೇನು ಇಷ್ಟು ದರ ಎಂದು ಗೊಣಗುತ್ತಲೇ ಹಬ್ಬದ ಸಂಭ್ರಮದಿಂದ ಖರೀದಿಸುತ್ತಿದ್ದರು. ಭಾನುವಾರದಂದು ಜನ ದಟ್ಟಣೆ ಇಲ್ಲದಿರುವ ನಗರದ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ, ರಥದ ಬೀದಿಗಳು ಹಬ್ಬದ ಹಿನ್ನೆಲೆಯಲ್ಲಿ ಜನದಟ್ಟಣೆಯಿಂದ ಕೂಡಿದ್ದವು. ಹಬ್ಬದ ಹಿನ್ನೆಲೆಯಲ್ಲಿ ದಿನಸಿ ಅಂಗಡಿಗಳು ಸಹ ತೆರೆದಿದ್ದು, ಹಬ್ಬದ ಕಾರಣ ಜನರು ದಿನಸಿ ಸಾಮಾನುಗಳನ್ನು ಖರೀದಿಸಿದರು.