ಬೆಂಗಳೂರು: ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು ಕಾರುಗಳನ್ನು ಖರೀದಿಸಿ, ಅವುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಕುಮಾರ್(38) ಮತ್ತು ಮನ್ಸೂರ್ ಮಿರ್ಜಾ(38) ಬಂಧಿತರು. 80 ಲಕ್ಷ ರೂ. ಮೌಲ್ಯದ 7 ಮಹಿಂದ್ರಾ ಕ್ಲೈಲೋ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ವಂಚನೆ ಸಂಬಂಧ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಫೈನಾನ್ಸ್ ಸರ್ವೀಸಸ್‌ನ ಏರಿಯಾ ಮ್ಯಾನೆಜರ್ ಮೋಹನ್ ಕುಮಾರ್ ಎಂಬವರು ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸಿಸಿಬಿಗೆ ಪ್ರಕರಣ ವರ್ಗಾಯಿಸಲಾಗಿತ್ತು. 2018ರಲ್ಲಿ ಮಹೀಂದ್ರಾ ಫೈನಾನ್ಸ್ ಕಚೇರಿಗೆ ಬಂದಿದ್ದ ಆರೋಪಿ ಪ್ರದೀಪ್ ಕುಮಾರ್, ತಾನೂ ಬೆಂಗಳೂರು ಟ್ರಾನ್ಸ್‌ಪೋರ್ಟ್ ಸಲ್ಯೂಷನ್ ಎಂಬ ಕಂಪನಿ ತೆರೆದಿದ್ದು, ಈ ಕಂಪನಿಗೆ ವಾಹನ ಖರೀದಿಸಲು ಸಾಲ ನೀಡುವಂತೆ ಕೋರಿದ್ದರು. ಅದರಲ್ಲಿ ಕಚೇರಿ ಮತ್ತು ವಾಸದ ಮನೆಯ ವಿಳಾಸ ಮತ್ತು ದಾಖಲೆ ನೀಡಿದ್ದರು. ಅದನ್ನು ಪರಿಶೀಲಿಸಿದ ಫೈನಾನ್ಸ್ ಕಂಪನಿ ಅಧಿಕಾರಿಗಳು 6 ಮಹೀಂದ್ರಾ ಕ್ಲೈಲೋ ವಾಹನಗಳಿಗೆ ಸಾಲ ಮಂಜೂರು ಮಾಡಿದ್ದರು. ಸಾಲ ಪಡೆದ ಆರೋಪಿ ಸಾಲದ ಕಂತನ್ನು ಪಾವತಿಸಿರಲಿಲ್ಲ.
ಈ ಬಗ್ಗೆ ಫೈನಾನ್ಸ್ ಕಚೇರಿ ಸಿಬ್ಬಂದಿ 3 ತಿಂಗಳ ಬಳಿಕ ವಿಳಾಸ ನೀಡಿದ ಸ್ಥಳಕ್ಕೆ ಹೋದಾಗ ಅಲ್ಲಿ ಯಾವುದೇ ಕಚೇರಿ ಇಲ್ಲದಿರುವುದು ಕಂಡು ಬಂದಿದೆ. ಜತೆಗೆ ಆತ ಅರ್ಜಿಯಲ್ಲಿ ಉಲ್ಲೇಖೀಸಿದ್ದ ಮನೆ ವಿಳಾಸಕ್ಕೆ ಹೋಗಿ ನೋಡಿದಾಗಲೂ ಈ ಹೆಸರಿನ ವ್ಯಕ್ತಿ ಇಲ್ಲ ಎಂಬುದು ಗೊತ್ತಾಗಿದೆ. ಈ ಮಧ್ಯೆ ದೂರುದಾರ ಮೋಹನ್ ಕುಮಾರ್ ಗೆ ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಓ ಕಚೇರಿಯಿಂದ ಕರೆ ಬಂದಿದ್ದು, ಹೈದರಾಬಾದ್ ಆರ್‌ಟಿಓ ಕಚೇರಿಯಿಂದ ಮಹೀಂದ್ರಾ ಕ್ಲೈಲೋ ವಾಹನ ವರ್ಗಾವಣೆ ಮಾಡಲು ಬಂದಿದ್ದು, ಅದರಲ್ಲಿ ಫೈನಾನ್ಸ್ ಸಾಲ ತೀರಿಸಿವುದಾಗಿ ದಾಖಲೆಗಳು ಮತ್ತು ಮಾರಾಟ ಮಾಡಲು ಫೈನಾನ್ಸ್ ಕಂಪನಿ ಎನ್‌ಒಸಿ ನೀಡಿದೆ ಎಂದು ತಿಳಿಸಲಾಗಿದೆ.
ಆದರೆ, ಕೆಲ ದಾಖಲೆಗಳ ಬಗ್ಗೆ ಅನುಮಾನ ಬಂದಿದ್ದು, ಅವುಗಳ ದೃಢಪಡಿಸಬೇಕು ಎಂದು ತಿಳಿಸಿದ್ದಾರೆ. ಗಾಬರಿಗೊಂಡ ಮೋಹನ್ ಕುಮಾರ್ ಆರ್‌ಟಿಓ ಕಚೇರಿಗೆ ತೆರಳಿ ವಿಚಾರಿಸಿದಾಗ ಎಲ್ಲವೂ ನಕಲಿ ಎಂಬುದು ಗೊತ್ತಾಗಿದೆ. ಜತೆಗೆ ಸಹಿ ಹಾಗೂ ಕಂಪನಿಯ ಸೀಲ್ ಸೇರಿ ಎಲ್ಲ ನಕಲಿ ಮಾಡಿರುವುದು ಪತ್ತೆಯಾಗಿದೆ. ಆ ಬಳಿಕ ಇತರೆ ಐದು ವಾಹನಗಳ ಬಗ್ಗೆ ಪರಿಶೀಲಿಸಿದಾಗ, ಈ ಪೈಕಿ ಒಂದು ವಾಹನ ಹೈದರಾಬಾದ್‌ನಲ್ಲಿ ಮಾರಾಟ ಆಗಿರುವುದು ಬೆಳಕಿಗೆ ಬಂದಿದೆ.
ಕಂಪನಿಯ ನಕಲಿ ಸಹಿ ಬಳಕೆ: ಆರೋಪಿಗಳ ಪೈಕಿ ಪ್ರದೀಪ್ ಕುಮಾರ್ ಫೈನಾನ್ಸ್ ಕಂಪನಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ವಾಹನಗಳನ್ನು ಖರೀದಿಸಿದರೆ, ಆ ವಾಹನಗಳನ್ನು ಮನ್ಸೂರ್ ಮಿರ್ಜಾ ಹೈದರಾಬಾದ್‌ನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ಮಾರಾಟ ಮಾಡುತ್ತಿದ್ದರು. ಫೈನಾನ್ಸ್ ಕಂಪನಿಯ ನಕಲಿ ಸೀಲ್ ಮತ್ತು ಸಹಿ ನಕಲಿ ಮಾಡಿ ಎನ್‌ಒಪಿ ದಾಖಲೆಗಳನ್ನು ತಲೆಮರೆಸಿಕೊಂಡಿರುವ ಆರೋಪಿಗಳು ಸೃಷಿcಸುತ್ತಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಹೈದರಾಬಾದ್‌ನ ಸಂಸ್ಥೆಗಳಿಗೂ ವಂಚನೆ : ತನಿಖೆ ವೇಳೆ ಆರೋಪಿಗಳು ಹೈದರಾಬಾದ್ ನಲ್ಲೂ ಇದೇ ರೀತಿ ಎರಡು ಖಾಸಗಿ ಫೈನಾನ್ಸ್ ಕಂಪನಿಗಳಿಗೆ ವಂಚಿಸಿ 2 ವಾಹನ ಖರೀದಿಸಿರುವುದು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು