ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಕೊನೆಯ ಕ್ಷಣದಲ್ಲಿ ವಿಮಾನದ ಟಿಕೆಟ್ ಖರೀದಿಸಿ ಅದರಲ್ಲಿನ ಶೇ.25ರಷ್ಟನ್ನು ತುಟ್ಟಿಭತ್ಯೆಯಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮಾಹಿತಿ ಹಕ್ಕು ಕಾಯ್ದೆಯನ್ವಯ ಈ ಸಿಕ್ಕಿರುವ ಈ ವಿವರದ ಬಗ್ಗೆ ಇಂಗ್ಲಿಷ್ ಸುದ್ದಿವಾಹಿನಿ “ಟೈಮ್ಸ್ ನೌ’ ವರದಿ ಪ್ರಸಾರ ಮಾಡಿದೆ.
ಇದರಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗುತ್ತಿದೆ ಎಂದು ಅದರಲ್ಲಿ ಹೇಳಿಕೊಳ್ಳಲಾಗಿದೆ. 2016ರ ಏಪ್ರಿಲ್‌ನಿಂದ ಮಾರ್ಚ್ 2017ರ ವರೆಗಿನ ಅವಧಿಯಲ್ಲಿ ಸಂಸದರು ಕೊನೆಯ ಹಂತದಲ್ಲಿ ಬ್ಯುಸಿನೆಸ್ ಕ್ಲಾಸ್‌ನ ಟಿಕೆಟ್ ಬುಕ್ ಮಾಡಿಸಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ.
ಪ್ರತಿ ತಿಂಗಳು 5 ಲಕ್ಷ ರೂ.ವರೆಗೆ ವೆಚ್ಚವಾಗಿದೆ. ಒಟ್ಟಾರೆಯಾಗಿ ಒಂದು ವರ್ಷದ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರೇ 35 ಕೋಟಿ ರೂ.ನಷ್ಟು ಮೊತ್ತವನ್ನು ಡಿ.ಎ. ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪಟ್ಟಿಯಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ (59,97,998 ಲಕ್ಷ ರೂ), ಗೋವಾದ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಶಾಂತರಾಮ್ ನಾಯಕ್ (41,93,583 ಲಕ್ಷ ರೂ.), ಟಿಎಂಸಿ ನಾಯಕ ಸುಖೇಂದು ಶೇಖರ್ ರಾಯ್ (61,72,271 ಲಕ್ಷ ರೂ), ಡಿಎಂಕೆಯ ತಿರುಚ್ಚಿ ಶಿವ (58,79,198 ಲಕ್ಷ ರೂ), ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿ.ವೇಣುಗೋಪಾಲ್ (32.6 ಲಕ್ಷ ರೂ.), ಸಿಪಿಐ ನಾಯಕ ಡಿ.ರಾಜಾ (65,72,271 ಲಕ್ಷ ರೂ.) ಮೊತ್ತ ಪಡೆದುಕೊಂಡಿದ್ದಾರೆ.
ಇನ್ನುಳಿದಂತೆ ಸಿಪಿಎಂನ ರಿತಂಭರಾ ಬ್ಯಾನರ್ಜಿ (68,24,335 ಲಕ್ಷ ರೂ), ಕಾಂಗ್ರೆಸ್‌ನ ಪಿ.ಭಟ್ಟಾಚಾರ್ಯ (53,12,550 ಲಕ್ಷ ರೂ.), ಸಂಸದರಾದ ಆನಂದ ಭಾಸ್ಕರ ರಾಪೋಲಿ (52,48,328 ಲಕ್ಷ ರೂ), ನರೇಂದ್ರ ಬುದಾನಿಯಾ (41,38,300 ಲಕ್ಷ ರೂ.) ಜಾಯ್ ಅಬ್ರಹಾಂ (47,03,278 ಲಕ್ಷ ರೂ.) ಪಡೆದುಕೊಂಡಿದ್ದಾರೆಂದು ವರದಿ ಹೇಳಿಕೊಂಡಿದೆ.