ಬಳ್ಳಾರಿ: ರಾಗಿ, ಭತ್ತ, ಜೋಳ ಮತ್ತಿತರೆ ಬೆಳೆಗಳನ್ನು ಬೆಂಬಲ ಬೆಲೆಗೆ ಖರೀದಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.
ರೈತವಿರೋಧಿ, ಜನವಿರೋಧಿ ನೀತಿ, ಕಾನೂನು, ಬಿಲ್‌ಗಳನ್ನು ಜಾರಿಗೊಳಿಸುತ್ತಿರುವ ಕೇಂದ್ರ, ರಾಜ್ಯ ಸರ್ಕಾರಗಳು, ರೈತರು ಬೆಳೆದ ರಾಗಿ, ಜೋಳ, ಗೋವಿನಜೋಳ, ಭತ್ತ ಸೇರಿದಂತೆ ಹಲವಾರು ಬೆಳೆಗಳಿಗೆ ಸೂಕ್ತ ಬೆಂಬಲಬೆಲೆ ನೀಡದೆ ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುತ್ತಿದೆ. ರೈತರ ಬದುಕನ್ನು ಮೂರಾಬಟ್ಟೆ ಮಾಡಿ ರೈತಾಪಿ ವರ್ಗವನ್ನು ನಾಶಗೊಳಿಸಲು ಯತ್ನಿಸುತ್ತಿವೆ. ಕೈಗಾರಿಕೆಗೆ ಒಂದು ನೀತಿ, ಕೃಷಿಗೆ ಒಂದು ನೀತಿಯನ್ನು ಅನುಸರಿಸುತ್ತಾ ಕೃಷಿ ಕ್ಷೇತ್ರಕ್ಕೆ ಅನ್ಯಾಯವೆಸಗುತ್ತಿವೆ. ಇದು ನಿಲ್ಲಬೇಕು ಎಂದು ಸಂಘದ ಸದಸ್ಯರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕೈಗಾರಿಕೆ ಮತ್ತು ಕೃಷಿ ರಾಜ್ಯ ಮತ್ತು ದೇಶದ ಎರಡು ಕಣ್ಣುಗಳಿದ್ದಂತೆ. ದೇಶದ ಅಭಿವೃದ್ಧಿ ಆಧಾರಸ್ತಂಬಗಳಾಗಿವೆ. ಕೈಗಾರಿಕೆಗೆ ಆದ್ಯತೆ ನೀಡುವಂತೆ ಕೃಷಿಗೂ ಸಬ್ಸಿಡಿ, ಸಹಾಯಧನ ನೀಡುತ್ತ ರೈತರ ಬೆಳೆಗಳಿಗೆ ಎಂಆರ್‌ಪಿ ದರವನ್ನು ನಿಗದಿಗೊಳಿಸಿ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡು ಭತ್ತ, ರಾಗಿ, ಜೋಳ, ಮುಸುಕಿನಜೋಳ ಸೇರಿದಂತೆ ರೈತರ ದವಸ ಧಾನ್ಯಗಳಿಗೆ ಬೆಂಬಲ ಬೆಲೆ ನೀಡಿ ಸರ್ಕಾರದಿಂದಲೇ ಖರೀದಿಸಬೇಕು. ಬಡ ರೈತರ ಮನೆಗಳಿಗೆ ಕುಠೀರ ಜ್ಯೋತಿ, ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಮೂರು ಫೇಸ್ ವಿದ್ಯುತ್ ಪೂರೈಸಬೇಕು. ಟ್ರಾಕ್ಟರ್, ಕೃಷಿ ಉಪಕರಣಗಳ ಬೆಲೆ ಕಡಿತಗೊಳಿಸಬೇಕು. ರೈತ ಚಳವಳಿಗಾರರ ಮೇಲಿರುವ ಎಲ್ಲ ಕೇಸುಗಳನ್ನು ರದ್ದುಪಡಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಂಗನಕಲ್ಲು ಕೃಷ್ಣ ಉಪ್ಪಾರ, ಜಿಲ್ಲಾಧ್ಯಕ್ಷ ಎಂ.ಎಲ್.ಕೆ. ನಾಯ್ಡು, ಮಹಿಳಾ ಅಧ್ಯಕ್ಷೆ ಗಂಗಾ ಧಾರವಾಡ್ಕರ್, ಕಾರ್ಯಾಧ್ಯಕ್ಷ ಕೆ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ. ಈಶ್ವರಪ್ಪ, ದಿವಾಕರ್, ಸಿದ್ದರಾಮನಗೌಡ, ವಿರೂಪಾಕ್ಷಿ, ಬಿ. ಉಜ್ಜಿನಯ್ಯ, ನಾಗರಾಜ್, ಎರ್ರಿಸ್ವಾಮಿ, ಕೆ.ಮಾರೆಣ್ಣ, ವಿಜಯಕುಮಾರ್ ಸೇರಿದಂತೆ ಹಲವರು ಇದ್ದರು.