ಹಸಿಮೆಣಸನ್ನು ಸ್ವಲ್ಪ ಸ್ವಲ್ಪ ಸೀಳಿ, ಮಜ್ಜಿಗೆಗೆ ಹಾಕತೊಡಗಿದೆ. ಆ ಕಾರ್ಯಕ್ರಮ ಮುಗಿಯುವ ಮೊದಲೇ ಕೈಯುರಿ ಶುರುವಾಯಿತು. “ಇನ್ನು ಸ್ವಲ್ಪವೇ ಇರುವುದಲ್ಲವಾ?’ ಎನ್ನುತ್ತಾ ಅಷ್ಟೂ ಮೆಣಸನ್ನು ಹೆಚ್ಚಿ ಹಾಕಿ ಕೆಲಸ ಪೂರೈಸಿದೆ.
ಮದುವೆಯಾದ ಹೊಸತು. ಸೇರಿದ ಮನೆಯವರನ್ನು ಹೊಂದಿಸಿಕೊಳ್ಳುವ ಉತ್ಸಾಹ. ಉದ್ಯೋಗಸ್ಥಳಾದರೂ ಒಂದಿಷ್ಟು ರಜೆ ಹಾಕಿ ಭಾವನವರ ಹಳ್ಳಿಮನೆಯಲ್ಲಿ ನಾಲ್ಕು ದಿನ ಕಳೆದ ನೆನಪು. ಅತ್ತೆ-ಮಾವ ಇಲ್ಲದ ಮನೆಯಲ್ಲಿ ಅಕ್ಕ-ಭಾವನೇ ಹಿರಿಯರು.ಅಕ್ಕ-ಭಾವ, ಹಟ್ಟಿಯ ಗೊಬ್ಬರ ಹಾಕಿ ಹಸಿಮೆಣಸಿನ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ಧಾರಾಳ ಮೆಣಸಿನ ಕಾಯಿಗಳು ನೇತಾಡುತ್ತಿದ್ದವು. ಮನೆಯಲ್ಲಿ ಮಜ್ಜಿಗೆಯೂ ಧಾರಾಳವಿತ್ತು. “ಮಜ್ಜಿಗೆಮೆಣಸು ಮಾಡಿದರೆ ಹೇಗೆ?’ ಎಂಬ ದುಬುìದ್ಧಿ ಅವತ್ತು ನನಗ್ಯಾಕೆ ಬಂತೋ ದೇವರೇ ಬಲ್ಲ! ಯಾವತ್ತೂ ಅಂಥ¨ªೆಲ್ಲ ಸಾಹಸಕ್ಕೆ ಕೈ ಹಾಕದವಳು ಅವತ್ತು ಆ ಕೆಲಸಕ್ಕೆ ಕೈ ಹಾಕಿದ್ದೆ. ಬೇಡವೆನ್ನುವವರು ಯಾರೂ ಇರಲಿಲ್ಲವೆಂಬುದು ನನ್ನ ಗ್ರಹಚಾರ!
ಶ್ರದ್ಧೆಯಿಂದ ಅಷ್ಟೂ ಮೆಣಸನ್ನು ಕೊಯ್ದು ತಂದು, ತೊಳೆದಿಟ್ಟುಕೊಂಡೆ. ದಪ್ಪವಾದ ಹುಳಿಮಜ್ಜಿಗೆಗೆ ಒಂದಿಷ್ಟು ಉಪ್ಪು-ಇಂಗು ಬೆರೆಸಿದೆ. ಹಸಿಮೆಣಸನ್ನು ಸ್ವಲ್ಪ ಸ್ವಲ್ಪ ಸೀಳಿ, ಮಜ್ಜಿಗೆಗೆ ಹಾಕತೊಡಗಿದೆ. ಆ ಕಾರ್ಯಕ್ರಮ ಮುಗಿಯುವ ಮೊದಲೇ ಕೈಯುರಿ ಶುರುವಾಯಿತು. “ಇನ್ನು ಸ್ವಲ್ಪವೇ ಇರುವುದಲ್ಲವಾ?’ ಎನ್ನುತ್ತಾ ಅಷ್ಟೂ ಮೆಣಸನ್ನು ಹೆಚ್ಚಿ ಹಾಕಿ ಕೆಲಸ ಪೂರೈಸಿದೆ. ಉರಿ ಹೆಚ್ಚುತ್ತಲೇ ಹೋಯಿತು! ಅಬ್ಬಬ್ಟಾ! ಸಹಿಸಲಸಾಧ್ಯ! ಕಣ್ಣುಗಳಲ್ಲಿ ಗಂಗೆ-ಯಮುನೆಯರು! “ಹೊತ್ತ ಮೇಲೆ ಹೆರಲೇಬೇಕು’ ಗಾದೆ ಯಾಕೆ ನೆನಪಾಯಿತೋ ಗೊತ್ತಿಲ್ಲ. “ಮೆಣಸು ಹೆಚ್ಚಿದ ಮೇಲೆ ಕೈಯುರಿ ಅನುಭವಿಸಲೇಬೇಕು’ ಎಂಬ ಹೊಸ ಗಾದೆಯನ್ನು ನಾನೇ ಹೊಸೆದೆಸೆದೆ!
ಎರಡೂ ಕೈಗಳು ಭುಗುಭುಗು ಎಂದು ಉರಿಯತೊಡಗಿದ್ದವು! ಸೋಪು ಹಾಕಿ ತಿಕ್ಕಿ ಕೈಗಳನ್ನು ತೊಳೆದುಕೊಂಡೆ, ಹುಣಿಸೆಹಣ್ಣಿನ ನೀರಿನಲ್ಲಿ ಕೈಗಳನ್ನು ಮುಳುಗಿಸಿಟ್ಟುಕೊಂಡೆ, ನಲ್ಲಿಯ ನೀರಿಗೆ ಕೈ ಹಿಡಿದು ಕುಳಿತೆ, ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿಕೊಂಡೆ… ಉರಿ ಕಡಿಮೆಯಾದರೆ ಕೇಳಿ!
ನನ್ನವರಿಗೆ ದಿಕ್ಕೇ ತೋಚದಾಯಿತು. ಕೈಗಳು ಕೆಂಪಡರಿದ್ದನ್ನು ಕಂಡು ನನ್ನವರು ಕಂಗಾಲು! ಪಾಪ ಕಣ್ರೀ ಅವ್ರು, ಹೆಂಡತಿಯ ಕೈಯುರಿ ಶಮನ ಮಾಡಲು ಅವರು ಮಾಡದ ಉಪಾಯವಿಲ್ಲ. ನನಗಿಂತ ಅವರೇ ಹೆಚ್ಚು ಸಂಕಟಪಟ್ಟದ್ದು. (“ಅಯ್ಯೋ, ಗಂಡನ್ನ ಹೊಗಳ್ಳೋದು ನೋಡು’ ಅಂದ್ರಾ? ಅಯ್ನಾ, ನನ್ ಗಂಡನ್ನ ನಾನಲ್ಲದೆ ಮತ್ಯಾರು ಹೊಗಳ್ತಾರೆ? ಹಾಗೇನಾದರೂ ಹೊಗಳಿದರೆ ಅವರಿಗೆ ನನ್ನಿಂದ ಉಳಿಗಾಲ ಇರ್ತದಾ?) ಗಂಡನ ಪರದಾಟ ನೋಡಲಾರದೆ ನಾನು ಆ ಕೈಯುರಿಯಲ್ಲೂ ನಗುವಿನ ಮುಖವಾಡ ಹಾಕುವ ಪ್ರಯತ್ನದಲ್ಲಿದ್ದೆ! ಆದರೆ, ನನ್ನ ಸುಕೋಮಲ ಕೈಗಳು ಕೆಂಪಡರಿ ತಮ್ಮ ಅಳಲನ್ನು ನನ್ನವರೆದುರು ತೋಡಿಕೊಳ್ಳುತ್ತಿದ್ದವು! ಬುದ್ಧಿಯಿಲ್ಲದೆ ತಮಗೆ ತಂದಿಟ್ಟ ಅವಸ್ಥೆ ನೋಡೆಂದು ನನ್ನ ಬಗ್ಗೆ ದೂರುತ್ತಿದ್ದವು!
ನಾನಾಗಿಯೇ ಮಜ್ಜಿಗೆಮೆಣಸಿನ ಕಾರ್ಯಕ್ರಮವನ್ನು ಮೈಮೇಲೆ ಎಳೆದುಕೊಂಡಿದ್ದು. ಸುಮ್ಮನಿದ್ದರೂ ನಡೆಯುತ್ತಿತ್ತು. ಯಾವ ಕೆಲಸವನ್ನೂ, ಸೇರಿದ ಮನೆಯವರು ನನ್ನ ಮೇಲೆ ಹೇರಲಿಲ್ಲ-ಹೇರುತ್ತಿರಲಿಲ್ಲ. ನಾನಷ್ಟು ಉಮೇದಿನಿಂದ ಮಾಡಲು ಹೊರಟಾಗ ಬೇಡವೆನ್ನಲೂ ಇಲ್ಲ. ಮೆಣಸು ಇಷ್ಟು ಖಾರವಿರುತ್ತದೆ ಎಂದು ನನ್ನ ಮಂಕುಬುದ್ಧಿಗೆ ಹೊಳೆಯಲೂ ಇಲ್ಲ. ಒಟ್ಟಿನಲ್ಲಿ ಎಡವಟ್ಟಾಗಿತ್ತು! ಉರಿ ತಡೆಯಲಾರದೆ, ನನಗಿದು ಬೇಕಿತ್ತಾ? ಎಂದು ಪಶ್ಚಾತ್ತಾಪ ಪಡುತ್ತಾ, ಕೈಗೆ “ಉಫ್ ಉಫ್’ ಎಂದು ಊದಿಕೊಳ್ಳುತ್ತಾ ದಿನ ಕಳೆದೆ!
ಬೆಳಗ್ಗೆ ಶುರುವಾದ ಉರಿ ಸಂಜೆಯ ತನಕ ಇತ್ತು. ಮತ್ತೆ ನಿಧಾನವಾಗಿ ಕಡಿಮೆಯಾಗತೊಡಗಿತು. ಮರುದಿನಕ್ಕೆ ಕೈಗಳು ತಮ್ಮ ಮೂಲರೂಪ ಪಡೆದಿದ್ದವು. ಅಂದು ನನ್ನನ್ನು ಬಿಟ್ಟುಹೋದ ಮಜ್ಜಿಗೆಮೆಣಸನ್ನು ಮಾಡುವ ಪಿತ ¤ಎಲ್ಲಿಗೆ ಹೋಯಿತೊ ಇಂದಿನವರೆಗೂ ನಾಪತ್ತೆ! ಮತ್ತೆಂದೂ ನಾನು ಮಜ್ಜಿಗೆಮೆಣಸನ್ನು ಮಾಡುತ್ತೇನೆ ಎಂದು ಹೊರಡಲಿಲ್ಲ. ಸುಬ್ಬಮ್ಮನ ಅಂಗಡಿಯಿಂದ ತಂದ ಮಜ್ಜಿಗೆಯ ಮೆಣಸನ್ನು ಬೇಕೆನಿಸಿದಾಗ ಕರಿದು ತಿನ್ನುತ್ತಾ ಸುಖವಾಗಿದ್ದೇನೆ.
– ಸುರೇಖಾ ಭೀಮಗುಳಿ, ಬೆಂಗಳೂರು.