Advertisement

ಬಿಎಂಟಿಸಿಗೆ ಬೆಣ್ಣೆ; ಉ-ಕ ಸಾರಿಗೆಗೆ ಸುಣ್ಣ

04:04 PM Feb 12, 2022 | Team Udayavani |

ಹುಬ್ಬಳ್ಳಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ನೀಡಿದ ಕಾಳಜಿ ಉತ್ತರ ಕರ್ನಾಟಕ ಭಾಗದ ಸಾರಿಗೆ ಸಂಸ್ಥೆಗಳಿಗಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯ ಸೇರಿ ಇತರೆ ವೆಚ್ಚ ಭರಿಸಲು 200 ಕೋಟಿ ರೂ.ಗಳನ್ನು ಬಿಎಂಟಿಸಿಗೆ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಿಂತ ಹೀನಾಯ ಸ್ಥಿತಿಯಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆ ನಿವೃತ್ತರಿಗೆ ಆರ್ಥಿಕ ಸೌಲಭ್ಯ ನೀಡಲು ಆಸ್ತಿ ಅಡಮಾನ ಸಾಲಕ್ಕೆ ಮುಂದಾಗಿದ್ದರೂ ನಯಾ ಪೈಸೆ ಅನುದಾನವಿಲ್ಲ.

Advertisement

ಪ್ರತಿ ಆಯವ್ಯಯದಲ್ಲಿ ಬಿಎಂಟಿಸಿಗೆ ನೀಡುವ ಅನುದಾನ, ಹೆಚ್ಚುವರಿ ಅನುದಾನಗಳಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ. ಆದರೆ ಅದಕ್ಕಿರುವ ಕಾಲು ಭಾಗದಷ್ಟು ಕಾಳಜಿ ವಾಯವ್ಯ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಮೇಲಿಲ್ಲ ಎಂಬುದು ಪುನರಾವರ್ತನೆಯಾಗಿದೆ.

ಇದೀಗ ಬಿಎಂಟಿಸಿಗೆ ಭವಿಷ್ಯ ನಿಧಿ-100 ಕೋಟಿ ರೂ., ನಿವೃತ್ತ/ಮರಣ ಹೊಂದಿದ ನೌಕರರ ಉಪಧನ-70 ಕೋಟಿ ರೂ. ಹಾಗೂ ಗಳಿಕೆ ರಜೆ ನಗದೀಕರಣ-20 ಕೋಟಿ ರೂ., ಬಿಡಿಭಾಗ ಪೂರೈಕೆದಾರರ ಬಿಲ್‌ಗ‌ಳ ಪಾವತಿ-10 ಕೋಟಿ ಸೇರಿ ಒಟ್ಟು 200 ಕೋಟಿ ರೂ.ಗಳನ್ನು ಸರ್ಕಾರ ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಮೂರು ವರ್ಷಗಳಿಂದ ದುಡಿದ ಹಣ ಪಡೆಯಲು ಕಚೇರಿಗೆ ಅಲೆಯುತ್ತಿರುವುದು ಸಂಸ್ಥೆಯ ಅಧಿಕಾರಿಗಳಿಗೆ, ಸರ್ಕಾರಕ್ಕೆ ಕಾಣುತ್ತಿಲ್ಲ ಎಂಬುದು ನಿವೃತ್ತ ನೌಕರರ ಅಸಮಾಧಾನವಾಗಿದೆ.

ಬೇಜವಾಬ್ದಾರಿ ಮತ್ತೂಮ್ಮೆ ಸಾಬೀತು
2018 -19ರಿಂದ ಇಲ್ಲಿಯವರೆಗೆ ಬಿಎಂಟಿಸಿಗೆ 1669.81 ಕೋಟಿ ರೂ. ವಿಶೇಷ ಹಾಗೂ ಹೆಚ್ಚುವರಿ ಅನುದಾನ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹೊಸ ಬಸ್‌ ಖರೀದಿ, ವಿಶೇಷ ಆರ್ಥಿಕ ನೆರವು, ಬಂಡವಾಳ ಹೂಡಿಕೆಗೆ 416.51 ಕೋಟಿ ರೂ., ಇದೀಗ 200 ಕೋಟಿ ರೂ., ಕೆಎಸ್‌ಆರ್‌ಟಿಸಿಗೆ ನಾಲ್ಕು ವರ್ಷದಲ್ಲಿ ಸಿಕ್ಕಿದ್ದು 272.16 ಕೋಟಿ ರೂ., ಕೆಕೆಆರ್‌ಟಿಸಿಗೆ 196.56 ಕೋಟಿ. ಆದರೆ ತೀವ್ರ ಆರ್ಥಿಕ ಸಂಕಷ್ಟದಲ್ಲಿ ನಲುಗುತ್ತಿರುವ ವಾಯವ್ಯ ಸಾರಿಗೆಗೆ 198.52 ಕೋಟಿ ರೂ. ದೊರೆತಿದೆ. ಸಿಂಹಪಾಲು ಬಿಎಂಟಿಸಿಗೆ ನೀಡಲಾಗಿದೆ. ಬೆಂಗಳೂರು ಭಾಗದ ಸಚಿವರು, ಶಾಸಕರು ಅಲ್ಲಿನ ಸಂಸ್ಥೆಯ ಸುಧಾರಣೆಗೆ ತೋರುವ ಕಾಳಜಿ ಈ ಭಾಗದ ಜನಪ್ರತಿನಿಧಿಗಳಿಗಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದ್ದು, ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಇದೇ ಭಾಗದವರಿದ್ದರೂ ಈ ತಾರತಮ್ಯ ಏಕೆ ಎನ್ನುವುದು ಸಂಸ್ಥೆಯ ನೌಕರರ ಪ್ರಶ್ನೆಯಾಗಿದೆ.

ಆಸ್ತಿ ಅಡವಿಟ್ಟು ಸಾಲ
2019 ನವೆಂಬರ್‌ನಿಂದ ಇಲ್ಲಿಯವರೆಗೆ ನಿವೃತ್ತಿಯಾದವರಿಗೆ ನಯಾ ಪೈಸೆ ನೀಡಲಾಗಿಲ್ಲ. ದುಡಿಯುವ ಸಿಬ್ಬಂದಿ ಅರ್ಧ ವೇತನ, ಸರ್ಕಾರ ನೀಡಿದ ಮೇಲೆ ಉಳಿದ ಅರ್ಧ ಎನ್ನುವಂತಾಗಿದೆ. ಜನವರಿ ತಿಂಗಳ ವೇತನವೂ ಕೂಡ ಅರ್ಧ ದೊರೆಯಲಿದೆ. ನಿವೃತ್ತರಿಗೆ ಸೌಲಭ್ಯ ನೀಡಲು ವಾಯವ್ಯ ಸಾರಿಗೆ ಆಸ್ತಿ ಅಡವಿಟ್ಟು 300 ಕೋಟಿ ರೂ. ಸಾಲ ಪಡೆಯಲು ಸರ್ಕಾರದಿಂದ ಒಪ್ಪಿಗೆ ಪಡೆದಿದೆ. ಈ ಸಾಲ ಪಡೆಯಲು
ಬಿಎಂಟಿಸಿ ಕೂಡ ಸರ್ಕಾರದ ಅನುಮತಿ ಪಡೆದಿತ್ತು. ಆದರೆ ಸರ್ಕಾರವೇ ಹೆಚ್ಚುವರಿ ಅನುದಾನ ನೀಡಿದೆ. ಇದೇ ಸಮಸ್ಯೆ ವಾಯವ್ಯ ಸಾರಿಗೆಯಲ್ಲಿದ್ದರೂ ಸರ್ಕಾರ ಮರೆತಿದೆ ಎನ್ನುವುದು ನೌಕರರ ಅಳಲು

Advertisement

ಆರ್ಥಿಕ ಸಂಕಷ್ಟದ ಸಾರಿಗೆಗಳು
ವಾಯವ್ಯ ಸಾರಿಗೆಯಲ್ಲಿ ಗ್ರಾಚ್ಯುಟಿ-198 ಕೋಟಿ ರೂ., ಪಿಎಫ್‌-400 ಕೋಟಿ ರೂ., ಪೂರೈಕೆದಾರರಿಗೆ-21 ಕೋಟಿ ರೂ., ಬ್ಯಾಂಕ್‌ ಸಾಲ-250 ಕೋಟಿ ರೂ. ಹಾಗೂ ಇತರೆ ಬಾಕಿ ಸೇರಿ ಬರೋಬ್ಬರಿ 1223 ಕೋಟಿ ರೂ. ಹೊಣೆಗಾರಿಕೆಯಿದೆ. ಇನ್ನು ಕಲ್ಯಾಣ ಕರ್ನಾಟಕ ಸಾರಿಗೆ ಕೂಡ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆಯಾದರೂ ವಾಯವ್ಯ ಸಾರಿಗೆ ಹಾಗೂ ಬಿಎಂಟಿಸಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಇಂಧನ-98
ಕೋಟಿ ರೂ., ಗ್ರಾಚ್ಯುಟಿ-18.50 ಕೋಟಿ ರೂ., ಎಲ್‌ ಐಸಿ 11.40 ಕೋಟಿ ರೂ., ಪೂರೈಕೆದಾರರಿಗೆ 6.20 ಕೋಟಿ ರೂ., ಬ್ಯಾಂಕ್‌ ಲೋನ್‌ 100 ಕೋಟಿ ರೂ. ಬಾಕಿ ಸೇರಿ 251 ಕೋಟಿ ರೂ. ಹೊಣೆಗಾರಿಕೆಯಿದೆ.

ಈ ಭಾಗದ ಸಿಎಂ
ಇರುವುದರಿಂದ ತಾರತಮ್ಯ ಆಗಲು ಸಾಧ್ಯವಿಲ್ಲ. ಹಿಂದೆ ಇಲ್ಲಿನ ವಾಯವ್ಯ ಸಾರಿಗೆ ಸಂಸ್ಥೆ ಸುಧಾರಣೆಗೆ 500 ಕೋಟಿ ರೂ. ಬಜೆಟ್‌ನಲ್ಲಿ ನೀಡುವಂತೆ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಮುಂದಿನ ಅಧಿವೇಶನ ಸಂದರ್ಭದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸುತ್ತೇವೆ. ಇಲಾಖೆಯಿಂದ ಪ್ರಸ್ತಾವನೆ ನೀಡಿದರೆ ಮುಖ್ಯಮಂತ್ರಿಗಳು ಸ್ಪಂದಿಸುವುದರಲ್ಲಿ ಎರಡು ಮಾತಿಲ್ಲ.
ಶಂಕರ ಪಾಟೀಲ
ಮುನೇನಕೊಪ್ಪ, ಸಚಿವ

ವಾಯವ್ಯ ಸಾರಿಗೆ ಸಂಸ್ಥೆ ಉ-ಕ ಭಾಗದಲ್ಲಿದೆ ಎನ್ನುವ ಕಾರಣಕ್ಕೆ ಹಿಂದಿನಿಂದಲೂ ನಿರ್ಲಕ್ಷéಕ್ಕೊಳಗಾಗಿದೆ. ಈ ಭಾಗದವರು ಸಿಎಂ ಇರುವುದರಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಅನ್ಯಾಯ ಆಗಲ್ಲ ಎನ್ನುವ ನಿರೀಕ್ಷೆ ಹುಸಿಯಾಗಿದೆ. ನಮ್ಮ ಭಾಗದ ಮುಖ್ಯಮಂತ್ರಿಗಳಿಂದ ತಾರತಮ್ಯದ ಧೋರಣೆಯಾದಾಗ ಯಾರ ಮೇಲೆ ಭರವಸೆ ಇಡಬೇಕು. ಈ ಕುರಿತು ಸರ್ಕಾರ ಹಾಗೂ ಸದನದಲ್ಲಿ ಪ್ರಸ್ತಾಪಿಸುತ್ತೇನೆ.
ಪ್ರಸಾದ ಅಬ್ಬಯ್ಯ, ಶಾಸಕ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next