ಬೆಂಗಳೂರು: ಸಾಮಾನ್ಯವಾಗಿ ಕೆಲ ರಾಜಕೀಯ ನಾಯಕರು ತಮ್ಮ ಪರವಾಗಿ ಓಟು ಮಾಡುವಂತೆ ನೋಟು ಕೊಡ್ತಾರೆ. ಆದರೆ, ನಗರದ ನೃಪತುಂಗ ರಸ್ತೆಯಲ್ಲೊಂದು ಹೋಟೆಲ್ ಇದೆ. ಅಲ್ಲಿ ನೀವು ಏ.18ರಂದು ಯಾರಿಗೇ ವೋಟು ಮಾಡಿ ಬಂದರೂ ಗರಿ ಗರಿ ಬೆಣ್ಣೆ ದೋಸೆ, ಸಿಹಿ ತಿಂಡಿ ಹಾಗೂ ತಂಪು ಪಾನಕ ಉಚಿತವಾಗಿ ದೊರೆಯುತ್ತದೆ!
ಜನ ಮತದಾನದ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ನೃಪತುಂಗ ರಸ್ತೆಯ ನಿಸರ್ಗ ಗ್ರಾಂಡ್ ಹೋಟೆಲ್ ಮಾಲಿಕರು ಮಾಡಿರುವ ಪ್ಲಾನ್ ಇದು. ಮತ ಹಾಕಿ ಬಂದ ಮತದಾರರು ತೋರು ಬೆರಳಿಗೆ ಹಾಕಿದ ಶಾಯಿ ಗುರುತು ತೋರಿಸಿದರೆ ಸಾಕು, ಆ ವ್ಯಕ್ತಿಗೆ ಬೆಣ್ಣೆ ಖಾಲಿ ದೋಸೆ, ಸಿಹಿ ತಿಂಡಿ ಮತ್ತು ತಂಪು ಪಾನಕವನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ಹೋಟೆಲ್ ಎದುರು ಈ ಬಗ್ಗೆ ಫಲಕವನ್ನು ಕೂಡ ಹಾಕಿದ್ದಾರೆ. ಇದು ಈಗ ಗ್ರಾಹಕರ ಮನಸೆಳೆಯುತ್ತಿದೆ. ಕೆಲವರು ಇದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಾಕಿ, ಮೆಚ್ಚುಗೆ ಸೂಚಿಸಿದ್ದಾರೆ.
ಈ ಹಿಂದೆ ಚುನಾವಣೆಯಲ್ಲಿ ಮತದಾನ ಮಾಡಿದರೆ, ಟೀ-ಕಾಫಿ ಉಚಿತವಾಗಿ ನೀಡುವ ಮೂಲಕ ಹಲವು ಹೋಟೆಲ್‌ಗಳು ಜಾಗೃತಿ ಮೂಡಿಸುತ್ತಾ ಬಂದಿವೆ. ಹೋಟೆಲ್ ನಿಸರ್ಗ ಗ್ರಾಂಡ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಣ್ಣೆ ಖಾಲಿ ದೋಸೆ ಮತ್ತು ಸಿಹಿ ತಿಂಡಿ ನೀಡಲಿದೆ. “ಇದು ಸಾಮಾಜಿಕ ಕಳಕಳಿವುಳ್ಳ ರಾಜಕೀಯೇತರ ಕಾರ್ಯಕ್ರಮ. ಮತದಾನ ಉತ್ತೇಜನಕ್ಕಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೋಟೆಲ್ ಎದುರು ಪ್ರಕಟಿಸಿರುವ ಮಾಹಿತಿ ಫಲಕದಲ್ಲಿ ಸ್ಪಷ್ಟಪಡಿಸಲಾಗಿದೆ.
ಸಾಕ್ಷರತಾ ಕ್ಲಬ್‌ನಿಂದ ಜಾಗೃತಿ: ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜು ಯುವ ಮತದಾರರಲ್ಲಿ ಜಾಗೃತಿ ಮೂಡಿಸಿದೆ. ಅಷ್ಟೇ ಅಲ್ಲ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಚುನಾವಣಾ ಗುರುತಿನ ಚೀಟಿಯ ಅರ್ಜಿ ತುಂಬಿಸಿ, ಗುರುತಿನ ಚೀಟಿ ಪಡೆದುಕೊಳ್ಳವಂತೆ ಮಾಡಿದೆ.
ಈ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ಗಳ ವತಿಯಿಂದ ಜಾಥಾ ಮತ್ತು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಚುನಾವಣಾ ಜಾಗೃತಿ ಮೂಡಿಸಲಾಗಿದೆ. ಸರ್ಕಾರಿ ಕಲಾ ಕಾಲೇಜಿನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಮಹಾರಾಣಿ ಕಾಲೇಜಿನಲ್ಲಿನ 430 ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ತುಂಬಿದ್ದು, ಬಹುತೇಕರು ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲೂ ಹಲವು ವಿದ್ಯಾರ್ಥಿಗಳು ಗುರುತಿನ ಚೀಟಿ ಸ್ವೀಕರಿಸಿದ್ದಾರೆ. ಈ ಕಾಲೇಜುಗಳಲ್ಲಿ ಇವಿಎಂ ಮೂಲಕ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ವಿದ್ಯಾರ್ಥಿಗಳಿಗೆ ಚುನಾವಣಾ ವಿಷಯಗಳ ಕುರಿತು ಸ್ಪರ್ಧೆ ಆಯೋಜಿಸಿ, ಬಹುಮಾನವನ್ನೂ ನೀಡಲಾಗಿದೆ. “ನಮ್ಮ ಕಾಲೇಜಿನಲ್ಲಿ 23 ವರ್ಷ ತುಂಬಿದ ವಿದ್ಯಾರ್ಥಿಗಳೂ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳದೆ ಮತದಾನ ಪ್ರಕ್ರಿಯೆಯಿಂದ ಹೊರಗೆ ಉಳಿದಿದ್ದರು. ಕಡ್ಡಾಯ ಮತದಾನದ ಜಾಗೃತಿ ಮೂಡಿಸಿದ್ದರ ಫಲವಾಗಿ ಸಾಕಷ್ಟು ವಿದ್ಯಾರ್ಥಿಗಳು ಈಗ ಮತದಾನದ ಹಕ್ಕು ಹೊಂದಿದ್ದಾರೆ’ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ಡಾ.ವೀಣಾ ತಿಳಿಸಿದರು.