Advertisement

ಇನ್ನೂ ಯಾಕ ಬರಲಿಲ್ಲವ್ವ ವಾರಕ್ಕೊಮ್ಮೆ ಬರ್ತಿನಂದಾವ!

11:10 AM Feb 19, 2018 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಹಾಗೂ ಹೆಚ್ಚಿನ ಸ್ಥಾನ ಗೆಲ್ಲಬೇಕೆಂಬ ಉದ್ದೇಶ ದೊಂದಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಹುಬ್ಬಳ್ಳಿಯಲ್ಲಿ ಮನೆ ಮಾಡಿ ದ್ದಷ್ಟೇ ಬಂತು, ಅದರಿಂದೇನು ಪ್ರಯೋಜನ ವಾಗಲಿಲ್ಲ ಎಂದು ಸ್ವತಃ ಪಕ್ಷದ ಕಾರ್ಯಕರ್ತರೇ ಲೊಚಗುಟ್ಟುವಂತಾಗಿದೆ.

Advertisement

1983ರ ನಂತರದಲ್ಲಿ ಜನತಾ ಪರಿವಾರ ರಾಜ್ಯದಲ್ಲಿ ಅಧಿಕಾರ ಹಿಡಿದಾಗಲೊಮ್ಮೆ ಉತ್ತರ ಕರ್ನಾಟಕ ತನ್ನದೇ ಕೊಡುಗೆ ನೀಡುತ್ತ ಬಂದಿದೆ. ಜನತಾ ಪರಿವಾರ ವಿಭಜನೆಗೊಂಡು ಜೆಡಿಎಸ್‌ ಅಸ್ತಿತ್ವದ ನಂತರ ಉತ್ತರ ಕರ್ನಾಟಕವನ್ನು ಕಡೆಗಣಿಸ ಲಾಗಿದೆ ಎಂಬ ನೋವು ಈ ಭಾಗದ್ದಾಗಿತ್ತು. ಈ ನೋವು ನೀಗಿಸಲೆಂದೇ ಹುಬ್ಬಳ್ಳಿಯಲ್ಲಿ ಮನೆ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು.

ಹುಬ್ಬಳ್ಳಿಯಲ್ಲಿ ಮನೆ ಮಾಡುವ ವಿಚಾರದಲ್ಲಿ ಹಲವು ತಿಂಗಳುಗಳವರೆಗೆ ಜಗ್ಗಾಟ ನಡೆದಿತ್ತು. ಪಕ್ಷದ ಕೆಲ ಹಿರಿಯರು ಹುಬ್ಬಳ್ಳಿಯಲ್ಲಿ ಮನೆ ಮಾಡುವ ಬದಲು ತಿಂಗಳಲ್ಲಿ ಒಂದಿಷ್ಟು ದಿನ ಉತ್ತರ ಕರ್ನಾಟಕ್ಕೆ ಮೀಸಲಿಡಿ ಸಾಕು ಎಂಬ ಸಲಹೆ ನಡುವೆಯೂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು.

ಹುಬ್ಬಳ್ಳಿಯ ನವನಗರ ಬಳಿಯ ಗಾಮನಗಟ್ಟಿ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ ಕುಮಾರಸ್ವಾಮಿ, 2016ರ ನವೆಂಬರ್‌ 18ರಂದು ಗೃಹಪ್ರವೇಶ ಮಾಡಿದ್ದರಲ್ಲದೆ, ಅದೇ ದಿನ ಬೆಳಗಾವಿ ವಿಭಾಗ ಮಟ್ಟದ ಜೆಡಿಎಸ್‌ ಸಮಾವೇಶದ ಮೂಲಕ ಈ ಭಾಗದಲ್ಲಿ ಪಕ್ಷ ಬಲವರ್ಧನೆ ಸಿದ್ಧ ಎಂಬ ಸಂದೇಶ ಸಾರಿದ್ದರು.

ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪಕ್ಷದ ಸೇರಿದಂತೆ ಇನ್ನಿತರ ಮುಖಂಡರು ನೋಡಿಕೊಳ್ಳುತ್ತಾರೆ. ಇನ್ನೇನಿದ್ದರೂ ತಾವು ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಮುಂಬೈ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಸಂಚರಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಘೋಷಿಸಿದ್ದರು.

Advertisement

ಕುಮಾರಸ್ವಾಮಿಯವರು ಹುಬ್ಬಳ್ಳಿ ಯಲ್ಲಿ ಮನೆ ಮಾಡುತ್ತಿದ್ದಂತೆ ಕೊಂಚ ವಿಚಲಿತರಾದಂತೆ ಕಂಡ ಎದುರಾಳಿ ಪಕ್ಷಗಳವರು ಕುಮಾರಸ್ವಾಮಿ ವಿರುದ್ಧ ಟೀಕೆಗೆ ಮುಂದಾಗಿದ್ದರು. ಮನೆ ಮಾಡುವುದರಿಂದ ಯಾವ ಪ್ರಭಾವ ಬೀರದು ಎಂದು ಆರೋಪಿಸಿದ್ದರು. ಆರಂಭದ ಕೆಲ ದಿನ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಮುಂಬೈ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕ ಜಿಲ್ಲೆಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಹುರುಪು ಹೆಚ್ಚುವಂತೆ ಮಾಡಿದ್ದರು.

ಉತ್ತರ ಭಾಗದಲ್ಲಿ ಗ್ರಾಮ ವಾಸ್ತವ್ಯ, ರೈತರ ಸಮಾವೇಶ, ಜನರ ವಿವಿಧ ಪ್ರಮುಖ ಸಮಸ್ಯೆಗಳ ಬಗ್ಗೆ ಹೋರಾಟಕ್ಕಿಳಿಯುವ, ವಿಧಾನಸಭೆ ಚುನಾವ ಣೆಗೆ ಈ ಭಾಗದಿಂದ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಿ ಸಾಧ್ಯವಾದಷ್ಟೂ ಮುಂಚಿತವಾಗಿಯೇ ಪಟ್ಟಿ ಪ್ರಕಟಿಸಿ ಚುನಾವಣೆ ತಯಾರಿಯಲ್ಲಿ ತೊಡಗಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡುವ, ಅಂಗವಿಕಲರು, ಯುವಕರು, ಮಹಿಳೆಯರು, ರೈತರ ಮೇಲೆ ಪಕ್ಷ ಪ್ರಭಾವ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದರಾದರೂ ಇದರಲ್ಲಿ ಬಹುತೇಕವೂ ಜಾರಿಗೆ ಬರಲೇ ಇಲ್ಲ.

ಕೈ ಕೊಟ್ಟ ಆರೋಗ್ಯ: ಎಚ್‌.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದರೂ ನಿರೀಕ್ಷೆಯಂತೆ ಹೆಚ್ಚಿನ ದಿನ ಇಲ್ಲಿ ವಾಸ್ತವ್ಯ ಮಾಡದಿರುವುದಕ್ಕೆ ಹಲವು ಕಾರಣಗಳಿದ್ದರೂ ಅವರ ಅನಾರೋಗ್ಯ ಸ್ಥಿತಿ ಪ್ರಮುಖ ಕಾರಣವಾಯಿತು ಎನ್ನಲಾಗಿದೆ. ತಮ್ಮ ನಾಯಕ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದು, ಈ ಭಾಗದ ಪಕ್ಷ ಸಂಘಟನೆಗೆ ಒತ್ತು ದೊರೆಯಲಿದೆ ಎಂಬ ನಿರೀಕ್ಷೆ ಒಂದು ಕಡೆಯಾದರೆ, ಕುಮಾರಸ್ವಾಮಿಯವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ.

ವಿಜಯಪುರ ಜಿಲ್ಲೆಯಿಂದ ಸ್ಪರ್ಧೆಗೆ ಬಹುತೇಕ ನಿರ್ಧಾರವಾಗಿದೆ ಎಂಬ ಸುದ್ದಿಯಿಂದ ಜೆಡಿಎಸ್‌ ಕಾರ್ಯಕರ್ತರು ಹಾಗೂ ಟಿಕೆಟ್‌ ಆಕಾಂಕ್ಷಿಗಳಲ್ಲಿ ಸಹಜವಾಗಿಯೇ ಉತ್ಸಾಹ ಇಮ್ಮಡಿಗೊಳಿಸುವಂತೆ ಮಾಡಿತ್ತು. ಕುಮಾರಸ್ವಾಮಿಯವರಿಗೆ ಆರೋಗ್ಯ ಸಾಥ್‌ ನೀಡದೆ, ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದು, ಕುಮಾರ ಸ್ವಾಮಿಯವರನ್ನು ಹುಬ್ಬಳ್ಳಿ ಮನೆಯಿಂದ ದೂರ ಮಾಡಿತು. ಪಕ್ಷ ಸಂಘಟನೆ, ಚುನಾವಣೆಯಲ್ಲಿ ಲಾಭದ ಬಗ್ಗೆ ನಿರೀಕ್ಷೆ ಹೊತ್ತಿದ್ದ ಪಕ್ಷದ ಕಾರ್ಯಕರ್ತರಿಗೆ ಮತ್ತದೆ ನಿರಾಸೆ ಮೂಡುವಂತಾಯಿ ಎಂಬ ಮಾತುಗಳು ಜೆಡಿಎಸ್‌ನಲ್ಲಿ ಕೇಳಿ ಬರತೊಡಗಿವೆ.

ಬಿಜೆಪಿಗೆ ರಾಹುಲ್‌ ಗಾಂಧಿಯ ಭಯವಿಲ್ಲ. ರಾಹುಲ್‌ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ವಿರೋಧ ಪಕ್ಷಗಳೇ ಗೆದ್ದಿವೆ. ಅವರು ಪ್ರಚಾರಕ್ಕೆ ಹೋದರೆ ಕಾಂಗ್ರೆಸ್‌ಗೆ ಸೋಲು ಗ್ಯಾರಂಟಿ. ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಆದಂತೆ ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲಲಿದೆ. 
-ಪ್ರಹ್ಲಾದ್‌ ಜೋಶಿ, ಸಂಸದ

ಜೆಡಿಎಸ್‌ ಮತ್ತು ಬಿಎಸ್ಪಿ ಹೊಂದಾಣಿಕೆಯಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ. ಎರಡೂ ಪಕ್ಷಗಳಿಗೂ ಅಷ್ಟೊಂದು ಸಾಮರ್ಥ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಆ ರಾಜ್ಯಕ್ಕೆ ಏನೂ ಅಭಿವೃದ್ಧಿ ಮಾಡದ ಮಾಯಾವತಿ, ಈಗ ಇಲ್ಲಿಗೆ ಬಂದು ಏನು ಮಾಡುತ್ತಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next