ಪಿರಿಯಾಪಟ್ಟಣ: ಗ್ರಾಹಕನ ಶ್ರಮದ ಪ್ರತೀಕವಾದ ಹಣಕ್ಕೆ ಉತ್ತಮ ವಸ್ತುಗಳನ್ನು ಮಾರಾಟಗಾರ ಮತ್ತು ಉತ್ಪಾದಕರು ನೀಡ ಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಅರ್ಜುನ್ ಎಸ್. ಮುಳ್ಳೂರ್ ತಿಳಿಸಿದರು.
ಪಿರಿಯಾಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನಡೆದ ಗ್ರಾಹಕರ ದಿನಾಚರಣೆ ಯಲ್ಲಿ ಮಾತನಾಡಿದ ಅವರು, ಪದಾರ್ಥ ಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ರೈತರು ತಮ್ಮ ಉಪಕರಣಗಳು, ಬೀಜಗಳು, ರಸಗೊಬ್ಬರ ಗಳನ್ನು ಖರೀದಿರುವಾಗ ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಹಕರಿಗೆ ಮಾರಾಟಗಾರರು ಎಲ್ಲಾ ರೀತಿಯ ಮಾಹಿತಿ ನೀಡಬೇಕು. ತೆರಿಗೆವಂಚಿಸಲು ಬಿಲ್ ನೀಡದೆ ವಸ್ತುಗಳ ಮಾರಾಟ ಮಾಡುತ್ತಾರೆ. ಇದರಿಂದ ವಸ್ತುಗಳಲ್ಲಿ ವ್ಯತ್ಯಾಸವಾದರೆ ಗ್ರಾಹಕನಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಯಾವುದೇ ವಸ್ತುಗಳನ್ನು ಖರೀದಿಸುವಾಗ ಬಿಲ್ ಪಡೆದರೆ ಮುಂದೆ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು ಮತ್ತು ಇದರ ವಿರುದ್ಧ ಗ್ರಾಹಕರ ಪರಿಷತ್ ಮೊರೆಹೋಗಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದು ಅಂತಾರಾಷ್ಟ್ರೀಯ ಆಟಗಾರನಿಗೆ ತಪ್ಪು$ ಶಸ್ತ್ರಚಿಕಿತ್ಸೆ ನಡೆಸಿತ್ತು. ಈ ಆಸ್ಪತ್ರೆಯ ವಿರುದ್ಧ ಗ್ರಾಹಕರ ಪರಿಷತ್‌ನಲ್ಲಿ ಆಟಗಾರ ಪ್ರಶ್ನಿಸಿ ಪರಿಹಾರ ಪಡೆಯಲು ಮುಂದಾಗಿದ್ದ. ಆದರೆ, ಆಸ್ಪತ್ರೆ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಶ್ನಿಸಿ ಅಂತಿಮವಾಗಿ ಸುಪ್ರೀಂಕೋರ್ಟ್ ಗ್ರಾಹಕರ ನ್ಯಾಯಾಲಯ ನೀಡಿದ ತೀರ್ಪಿನ ಪರಿಹಾರದ 6 ಪಟ್ಟು ಹೆಚ್ಚು ನೀಡುವಂತೆ ಗ್ರಾಹಕನ ಪರವಾಗಿ ತೀರ್ಪು ನೀಡಿತು.
ಆದ್ದರಿಂದ ಸೇವೆ ಒದಗಿಸುವವರು ಮತ್ತು ಗ್ರಾಹಕರು ಎಚ್ಚರಿಕೆಯಿಂದ ನಡೆದುಕೊಳ್ಳ ಬೇಕು ಎಂದು ತಿಳಿಸಿದರು. ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾ ಧೀಶ ವಿ. ಹನುಮಂತಪ್ಪ ಮಾತನಾಡಿ, ಪ್ರತಿ ವಸ್ತುವನ್ನು ಖರೀದಿಸುವಾಗ ಅದರ ಅವಧಿ ಮುಗಿದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ಆ ವಸ್ತುವಿನಲ್ಲಿ ಏನೆಲ್ಲಾ ಇದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ವಕೀಲರು ಕೂಡ ತಮ್ಮ ಕಕ್ಷಿದಾರರಿಗೆ ಸರಿಯಾದ ವಾದ ಮಂಡಿಸಿ ನ್ಯಾಯ ಕೊಡಿಸದಿದ್ದರೆ ಅವರ ಮೇಲು ಗ್ರಾಹಕರ ಪರಿಷತ್‌ನಲ್ಲಿ ದೂರು ದಾಖಲಿಸ ಬಹುದು. ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಗ್ರಾಹಕ ಮಂಡಳಿ ಇರುತ್ತದೆ. ಗ್ರಾಹಕರಿಗೆ ಯಾವುದೇ ವಂಚನೆಯಾದರೂ ಈ ಮಂಡಳಿಯಲ್ಲಿ ದೂರು ದಾಖಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಹುದು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಭಾಸ್ಕರ್ ಮಾತನಾಡಿ, ಗ್ರಾಹಕರ ಹಕ್ಕುಗಳನ್ನು ಪಡೆ ಯಲು ಪ್ರತಿಯೊಬ್ಬರೂ ಅದರ ತಿಳಿವಳಿಕೆ ಪಡೆದುಕೊಳ್ಳಬೇಕು ಎಂದು ಹೇಳಿದರು. ವಕೀಲರ ಸಂಘದ ಕಾರ್ಯದರ್ಶಿ ಎಂ.ಪಿ. ಹರೀಶ್, ವಕೀಲರಾದ ಸ್ವಾಮಿ, ಶಿವಸ್ವಾಮಿ, ಪಿ.ಎಂ.ರಮೇಶ್, ಮಂಜು ಹಾಜರಿದ್ದರು.