Advertisement
ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೂ ಬರದ ಬಿಸಿ ತಟ್ಟುವ ಲಕ್ಷಣಗಳು ಕಾಣಿಸಿರುವಾಗಲೇ ಪಶ್ಚಿಮ ವಾಹಿನಿ ಯೋಜನೆಯನ್ನು ಅನುಷ್ಠಾನಿಸಲು ಸರಕಾರ ಮುಂದಾಗುವ ಸಾಧ್ಯತೆಯಿದೆ ಎಂಬ ಕಿವಿಗಿಂಪು ಸುದ್ದಿಯೊಂದು ತೇಲಿ ಬಂದಿದೆ. ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಪಶ್ಚಿಮ ವಾಹಿನಿ ಯೋಜನೆಯನ್ನು ಅನುಷ್ಠಾನಿಸುವ ಪ್ರಸ್ತಾವ ಮಂಡಿಸುತ್ತಾರೆಯೇ ಇಲ್ಲವೇ ಅನ್ನುವುದು ಬೇರೆ ವಿಚಾರ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕರಾವಳಿಗೆ ಈ ಯೋಜನೆ ಅಗತ್ಯವಾಗಿ ಬೇಕು. ಏಕೆಂದರೆ ಈಗ ಉಳಿದೆಡೆಗಳಂತೆ ಕರಾವಳಿಯಲ್ಲೂ ಬೇಸಿಗೆ ಶುರುವಾಗುವುದಕ್ಕಿಂತಲೂ ಮೊದಲೇ ನೀರಿನ ಕೊರತೆ ಕಂಡು ಬರುತ್ತಿದೆ. ಸಮೃದ್ಧ ಜಲಮೂಲಗಳಿದ್ದರೂ ಕರಾವಳಿ ಜಿಲ್ಲೆಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಇದಕ್ಕೆ ಕಾರಣ ಜಲ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸುವ ಯೋಜನೆಗಳ ಕೊರತೆ.
Related Articles
Advertisement
2001ರಲ್ಲಿ ಯೋಜನೆ ರೂಪಿಸುವಾಗ 100 ಕೋ. ರೂ. ವೆಚ್ಚ ಅಂದಾಜಿಸಲಾಗಿತ್ತು. 2005ರಲ್ಲಿ ಅದು 423 ಕೋಟಿಗೇರಿತ್ತು. ಈಗ 1,000 ಕೋ. ರೂ. ವೆಚ್ಚ ಅಂದಾಜಿಸಲಾಗಿದೆ. ಬಜೆಟ್‌ನಲ್ಲಿ ಪ್ರಸ್ತಾವವಾಗಿ ಉಳಿದ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಅನುಷ್ಠಾನಗೊಳ್ಳುವಾಗ ವೆಚ್ಚ ಇಮ್ಮಡಿಯಾದರೂ ಆಶ್ಚರ್ಯವಿಲ್ಲ. ಹಾಲಿ ಸರಕಾರದ ಅವಯಿರುವುದು ಇನ್ನು ಒಂದು ವರ್ಷ ಮಾತ್ರ. ಅಷ್ಟರೊಳಗೆ ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನವಾದೀತು ಎಂದು ನಿರೀಕ್ಷಿಸುವಂತಿಲ್ಲ. ಮಹದಾಯಿ, ಮಲಪ್ರಭಾ ಎಡದಂಡೆಯಂತಹ ಪ್ರಮುಖ ಯೋಜನೆಗಳೇ ಕುಂಟುತ್ತಿವೆ; ವಾರಾಹಿ ಯೋಜನೆ ಪೂರ್ತಿಯಾಗಲು ಮೂರು ದಶಕ ಹಿಡಿದಿದೆ ಎನ್ನುವುದೇ ನೀರಾವರಿ ಯೋಜನೆಗಳು ಯಾವ ರೀತಿ ಅನುಷ್ಠಾನಗೊಳ್ಳುತ್ತಿವೆ ಎನ್ನುವುದಕ್ಕೆ ಸಾಕ್ಷಿ. ಈ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸರಕಾರ ಕನಿಷ್ಠ ಯೋಜನೆಯ ಅನುಷ್ಠಾನವನ್ನು ಘೋಷಿಸಿ ಅನುದಾನವನ್ನು ಮೀಸಲಿಟ್ಟರೆ ಅಷ್ಟರಮಟ್ಟಿಗೆ ಕರಾವಳಿ ಜನತೆ ಅವರಿಗೆ ಕೃತಜ್ಞರಾಗಿರುತ್ತಾರೆ. ಪಶ್ಚಿಮ ವಾಹಿನಿಗೂ ಪ್ರತ್ಯೇಕವಾದ ನಿಗಮ ಸ್ಥಾಪಿಸಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಲು ಕರಾವಳಿ ಭಾಗದ ಶಾಸಕರು ಪಕ್ಷಬೇಧವಿಲ್ಲದೆ ಒತ್ತಡ ಹಾಕಬೇಕು.