Advertisement
ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯಂತೆ ಕಂಡು ಬಂದಿದ್ದರೂ ಸಿದ್ಧಾರ್ಥ್ ಸಾವಿಗೆ ನಿಜವಾದ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸ್ ತನಿಖೆಯಿಂದಷ್ಟೇ ಗೊತ್ತಾಗಬೇಕಾಗಿದೆ. ಜು.29ರಂದು ಮಧ್ಯಾಹ್ನ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಸಿದ್ಧಾರ್ಥ್, ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ನದಿಯ ಉಳ್ಳಾಲ ಸೇತುವೆ ಮೇಲಿಂದ ರಾತ್ರಿ ಸುಮಾರು 7 ಗಂಟೆ ಹೊತ್ತಿಗೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿತ್ತು.
Related Articles
Advertisement
ಮೃತದೇಹ ತೇಲುತ್ತಿತ್ತು: ಸಾಮಾನ್ಯವಾಗಿ ನೀರಿಗೆ ಬಿದ್ದು ಸತ್ತರೆ 24 ಗಂಟೆಗಳೊಳಗೆ ಮೃತದೇಹ ಮೇಲಕ್ಕೆ ಬರುತ್ತದೆ. ಆದರೆ, ಈಗ ಮಳೆ ಬರುತ್ತಿದ್ದು, ನೀರು ಹೆಚ್ಚು ತಂಪು ಆಗಿರುವುದರಿಂದ ಸಿದ್ಧಾರ್ಥ್ ಮೃತದೇಹ ಮೇಲಕ್ಕೆ ಬರಲು ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಂಡಿರಬಹುದು ಎಂದು ಮೀನುಗಾರರು ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ತಲೆಕೆಳಗಾಗಿ ನೀರಿಗೆ ಬಿದ್ದಿರುವ ಸಂಶಯವಿದೆ. ಬೀಳುವ ರಭಸಕ್ಕೆ ತಲೆಗೆ ಏಟು ಬಿದ್ದ ಸಾಧ್ಯತೆ ಇದ್ದು, ಮೂಗಿನಿಂದ ರಕ್ತಸ್ರಾವವಾಗಲು ಅದು ಕಾರಣವಾಗಿರಬಹುದು ಎಂದು ಸ್ಥಳೀಯ ಮೀನುಗಾರ ರಿತೇಶ್ ಅಭಿಪ್ರಾಯಪಟ್ಟರು.
ಸಿದ್ಧಾರ್ಥ್ ನೀರಿಗೆ ಬಿದ್ದರೆನ್ನಲಾದ ನೇತ್ರಾವತಿ ಸೇತುವೆಯ ತಳ ಭಾಗದಲ್ಲಿ ಸುಮಾರು 30 ಅಡಿ ನೀರಿದೆ. ಆದರೆ, ಮೃತದೇಹ ಸಿಕ್ಕಿದ ಹೊಗೆ ಬಜಾರ್ ಐಸ್ ಪ್ಲಾಂಟ್ ಬಳಿ ನೀರು 10 ಅಡಿಯಷ್ಟೇ ಇದೆ. ನದಿಗೆ ಬಿದ್ದಲ್ಲಿಯೇ ಸಿದ್ಧಾರ್ಥ್ ಸಾವನ್ನಪ್ಪಿರಬೇಕು ಹಾಗೂ ಬಳಿಕ ಅಲ್ಲಿಂದ ಅವರ ದೇಹ ನೀರಿನ ಮೇಲ್ಭಾಗದಲ್ಲಿಯೇ ತೇಲಿ ಹೊಗೆ ಬಜಾರ್‌ನಲ್ಲಿ ನೀರಿನಡಿಯಲ್ಲಿ ನಿಂತಿರುವ ಸಾಧ್ಯತೆ ಇದೆ. ಸೇತುವೆ ಬಳಿಯಿಂದ ನೀರಿನ ಒಳಗಿಂದಲೇ ಮೃತದೇಹ ಕೆಳ ಭಾಗಕ್ಕೆ ಹೋಗಿರುತ್ತಿದ್ದರೆ ಅದು ನೇರವಾಗಿ ಅಳಿವೆ ಬಾಗಿಲು ದಾಟಿ ಸಮುದ್ರ ಸೇರುವ ಸಾಧ್ಯತೆ ಇತ್ತು ಎನ್ನುತ್ತಾರೆ ಸ್ಥಳೀಯರು.
ಮರಣೋತ್ತರ ಪರೀಕ್ಷೆ ಚಿತ್ರೀಕರಣ: ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, 2 ಗಂಟೆ ಕಾಲ ನಡೆದ ಪ್ರಕ್ರಿಯೆಯನ್ನು ಚಿತ್ರೀಕರಿಲಾಗಿದೆ. ಇದು ವಿಶೇಷ ಪ್ರಕರಣ ಆಗಿರುವುದರಿಂದ ಇಬ್ಬರು ಪೊರೆನ್ಸಿಕ್ ತಜ್ಞರನ್ನು ನಿಯೋಜಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಬರಲು ಸುಮಾರು 30 ದಿನಗಳು ಬೇಕಾಗುತ್ತವೆ. ಆದರೆ, ತುರ್ತು ಸಂದರ್ಭಗಳಲ್ಲಿ ಸ್ವಲ್ಪ ಬೇಗನೆ ವರದಿ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಿದ್ಧಾರ್ಥ್ ನಾಪತ್ತೆ ಬಗ್ಗೆ ಸೋಮವಾರ ರಾತ್ರಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.