ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 14 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ಮೆಹಲ್ ಚೋಸ್ಕಿಯನ್ನು ಓರ್ವ ವಂಚಕ ಎಂದು ಆ್ಯಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಬಣ್ಣಿಸಿದ್ದಾರೆ ಮತ್ತು ಸದ್ಯ ತನ್ನ ದೇಶದಲ್ಲಿ ತಲೆಮರೆಸಿಕೊಂಡಿರುವ ಈ ವಂಚಕ ಉದ್ಯಮಿಯನ್ನ ವಿಚಾರಣೆ ನಡೆಸಲು ಭಾರತೀಯ ತನಿಖಾಧಿಕಾರಿಗಳು ಮುಕ್ತ ಅವಕಾಶವನ್ನು ಹೊಂದಿದ್ದಾರೆ ಎಂದೂ ಆ್ಯಂಟಿಗುವಾ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಬ್ರೌನ್ ಅವರ ಈ ಹೇಳಿಕೆ ನೀರವ್ ಮೋದಿ ಮತ್ತು ಚೋಸ್ಕಿ ನಾಪತ್ತೆ ವಿಚಾರದಲ್ಲಿ ಭಾರತಕ್ಕೆ ಸಿಕ್ಕಿರುವ ರಾಜತಾಂತ್ರಿಕ ಜಯ ಎಂದು ಇದೀಗ ಬಣ್ಣಿಸಲಾಗುತ್ತಿದೆ. ಖಾಸಗಿ ಟಿವಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ್ಯಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ದೇಶದ ಪೌರತ್ವವನ್ನು ಹೊಂದುವ ಮೂಲಕ ಭಾರತದಿಂದ ನೇರವಾಗಿ ಇಲ್ಲಿಗೆ ಪರಾರಿಯಾಗಿ ಬಂದಿರುವ ಚೋಸ್ಕಿ ಪ್ರಕರಣದಿಂದಾಗಿ ತಮ್ಮ ದೇಶದ ಪೌರತ್ವಕ್ಕಿದ್ದ ಗೌರವ ಬಂಡವಾಳ ಹೂಡಿಕೆ ಕಾರ್ಯಕ್ರಮಗಳಿಗೆ ಯಾವ ರೀತಿಯಲ್ಲಿ ಹಿನ್ನಡೆಯನ್ನುಂಟು ಮಾಡಿತು ಎಂಬುದನ್ನೂ ಸಹ ಪ್ರಧಾನಿ ಬ್ರೌನ್ ಎಳೆ ಎಳೆಯಾಗಿ ಬಿಚ್ಚಿಟ್ಟರು. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿದ ಬಳಿಕ ಮೆಹುಲ್ ಚೋಸ್ಕಿ ಬಂಡವಾಳ ಹೂಡಿಕೆ ಕಾರ್ಯಕ್ರಮದಡಿಯಲ್ಲಿಯೇ ಬಂದು ಆ್ಯಂಟಿಗುವಾ ಮತ್ತು ಬಾರ್ಬುಡದಲ್ಲಿ ತಲೆಮರೆಸಿಕೊಂಡಿದ್ದ.
‘ಏನೇ ಆದರೂ ಈ ವಿಚಾರದಲ್ಲಿ ಭಾರತೀಯ ಅಧಿಕಾರಿಗಳು ನಮಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಿಲ್ಲ ಆದರೂ ಚೋಸ್ಕಿ ಭಾರತಕ್ಕೆ ಹಿಂದಿರುಗುವಂತಾಗುವುದು ಖಂಡಿತ’ ಎಂಬ ವಿಶ್ವಾಸವನ್ನು ಬ್ರೌನ್ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಮೆಹುಲ್ ಚೋಸ್ಕಿ ಗಡೀಪಾರಿಗೆ ಪ್ರಧಾನಿ ಬ್ರೌನ್ ಯಾವುದೇ ಕಾಲಮಿತಿ ನಿರ್ಣಯ ಹೇಳದಿದ್ದರೂ ನ್ಯಾಯಾಂಗ ಪ್ರಕ್ರಿಯೆಗಳ ಆಧಾರದಲ್ಲಿ ಚೋಸ್ಕಿ ಗಡೀಪಾರು ನಿಶ್ಚಿತ ಎಂದು ಬ್ರೌನ್ ಹೇಳಿರುವುದು ಚೋಸ್ಕಿಯನ್ನು ಭಾರತಕ್ಕೆ ಕರೆತರುವ ರಾಜತಾಂತ್ರಿಕ ಪ್ರಯತ್ನಗಳಿಗೆ ಬಲ ಬಂದಂತಾಗಿದೆ.
ಕೆರಿಬಿಯನ್ ಸಮದಾಯ ಮತ್ತು ಸಾಮಾನ್ಯ ಮಾರುಕಟ್ಟೆ (ಕ್ಯಾರಿಕೋಮ್) ವೇದಿಕೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಗೂ ಮೊದಲು ಗ್ಯಾಸ್ಟನ್ ಬ್ರೌನ್ ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ. ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯಲ್ಲಿ ವ್ಯಾಪಾರ ಮತ್ತು ಹೂಡಿಕೆಯೇ ಪ್ರಮುಖ ವಿಚಾರವಾಗಿ ಪ್ರಸ್ತಾವನೆಗೊಳ್ಳಲಿದೆ ಎಂದು ಬ್ರೌನ್ ಅವರು ಹೇಳಿದ್ದಾರೆ.
ತನ್ನ ಅಳಿಯ ವಜ್ರ ವ್ಯಾಪಾರಿ ನೀರವ್ ಮೋದಿ ಜೊತೆ ಸೇರಿ ಮೆಹುಲ್ ಚೋಸ್ಕಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 14 ಸಾವಿರ ಕೋಟಿ ರೂಪಾಯಿಗಳ ವಂಚನೆ ಎಸಗಿರುವ ಪ್ರಕರಣ ಇದಾಗಿದೆ. ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಬಳಿಕ ಅಲ್ಲಿನ ಪೊಲೀಸರಿಂದ ಬಂಧನಕ್ಕೊಳಗಾಗಿ ಇದೀಗ ಅಲ್ಲಿನ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿಯನ್ನು ಭಾರತಕ್ಕೆ ಕರೆಸಿಕೊಳ್ಳಲು ಕೇಂದ್ರ ಸರಕಾರವು ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ಚುರುಕುಗೊಳಿಸಿದೆ.