ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ ಲಾಭ ಪಡೆಯುವುದು ಹೇಗೆ ಎಂದು ಫೇಸ್‌ಬುಕ್‌ನಲ್ಲಿ ಉದ್ಯಮಿ ಮುಖೇಶ್ ಅಂಬಾನಿ ವಿವರಣೆಯ ವಿಡಿಯೋ ನೋಡಿ, ಕೆಳಗಿರುವ ವಾಟ್ಸ್‌ಆ್ಯಪ್ ಗ್ರೂಪ್ ಸೇರಿದ ಸೊರಬದ ವ್ಯಕ್ತಿಯೊಬ್ಬರು 20 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊರಬದ ಉದ್ಯಮಿಯೊಬ್ಬರು ಫೇಸ್‌ಬುಕ್‌ನಲ್ಲಿ ಮುಖೇಶ್ ಅಂಬಾನಿಯ ವಿಡಿಯೋ ವೀಕ್ಷಿಸಿ, ಕೆಳಗೆ ಸೂಚಿಸಿದ್ದ ವಾಟ್ಸ್‌ಆ್ಯಪ್ ಗ್ರೂಪ್ ಸೇರಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಕುರಿತು 2 ತಿಂಗಳು ತರಬೇತಿ ನೀಡಲಾಗಿತ್ತು. ಮೇ 1ರಂದು ಅನಿತಾ ತಿಬ್ರವಾಲ್ ಎಂಬ ಟೆಲಿಗ್ರಾಂ ಗ್ರೂಪ್‌ಗೆ ಜಾಯಿನ್ ಮಾಡಲಾಗಿತ್ತು. ಅಸೆಟ್ ಮ್ಯಾನೇಜ್‌ಮೆಂಟ್ ಎಂಬ ಅಕೌಂಟ್ ಕ್ರಿಯೇಟ್ ಮಾಡಿ, ಅದಕ್ಕೆ ಹಣ ಹೂಡಿಕೆ ಮಾಡುವಂತೆ ಟೆಲಿಗ್ರಾಂ ಖಾತೆಯಲ್ಲಿ ಸೂಚಿಸಲಾಗಿತ್ತು. ಸೊರಬದ ಉದ್ಯಮಿ ಹಂತ ಹಂತವಾಗಿ 20 ಲಕ್ಷ ರೂ. ವರ್ಗಾಯಿಸಿದ್ದರು. ಸ್ವಲ್ಪ ಸಮಯದ ಬಳಿಕ ಹಣ ವಿತ್ ಡ್ರಾ ಮಾಡಲು ಹೋದಾಗ ಅಸೆಟ್ ಮ್ಯಾನೇಜ್‌ಮೆಂಟ್ ಖಾತೆಯಲ್ಲಿ ಜೀರೋ ಎಂದು ತೋರಿಸುತ್ತಿತ್ತು.
ವಂಚನೆಗೊಳಗಾಗಿದ್ದು ಅರಿವಾದ ಹಿನ್ನೆಲೆಯಲ್ಲಿ ಸೊರಬದ ಉದ್ಯಮಿ ಈ ಬಗ್ಗೆ ದೂರು ನೀಡಿದ್ದಾರೆ.