ವರದಿ : ಶ್ರೀಶೈಲ್ ಕೆ. ಬಿರಾದಾರ/ಎಚ್.ಎಚ್. ಬೇಪಾರಿ
ಬಾಗಲಕೋಟೆ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹುನಗುಂದ ಮತಕ್ಷೇತ್ರದ ಇಳಕಲ್ ನಗರದ ಸರ್ವ ವಿಜಯಾ ಸೇವಾ ಸಂಸ್ಥೆಯ ಗೌರವಾಧ್ಯಕ್ಷ, ಉದ್ಯಮಿ ರಾಜು ಎಂ.ಬೋರಾ ಹಲವು ರೀತಿಯ ನೆರವಿಗೆ ಮುಂದಾಗಿದ್ದಾರೆ.
ಹೌದು, ಉದ್ಯಮಿ ರಾಜು ಎಂ.ಬೋರಾ ಕೊರೊನಾ ನಿಯಂತ್ರಣಕ್ಕಾಗಿ ಕೊರೊನಾ ಸೋಂಕಿತರ ಆರೋಗ್ಯದ ಹಿತದೃಷ್ಟಿಯಿಂದ ಆಕ್ಸಿಜನ್ ಖರೀದಿಗೆ ನೆರವು, ಕೊರೊನಾ ವಾರಿಯರ್ಗಳಿಗೆ ದಾಸೋಹ, ಕೊರೊನಾ ಜಾಗೃತಿ, ವ್ಯಾಕ್ಸಿನ್ ಪಡೆದ ಪ್ರತಿಯೊಬ್ಬರಿಗೂ ಪ್ರೋತ್ಸಾಹ, ಸಂಕಷ್ಟದ ಸಂದರ್ಭದಲ್ಲೂ ಸ್ಥಳಿಯ ಪ್ರತಿಭಾವಂತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡುವುದರ ಮೂಲಕ ಕೊರೊನಾ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಮುನ್ನೆಡೆದಿದ್ದಾರೆ.
ಆಕ್ಸಿಜನ್ ನೆರವು: ಎಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಹಿತದೃಷ್ಟಿಯಿಂದ ಉದ್ಯಮಿ ಬೋರಾ ಸಹಕಾರ ನೀಡುವ ಉದ್ದೇಶದಿಂದ ಪ್ರತಿಷ್ಠಿತ ಕುಮಾರೇಶ್ವರ ಆಸ್ಪತ್ರೆಗೆ 20 ಕೆಎಲ್ ಒಂದು ಕಂಟೇನರ್ ಆಕ್ಸಿಜನ್ ಖರೀದಿಗೆ 3 ಲಕ್ಷ 31 ಸಾವಿರ ರೂ. ನೆರವು ನೀಡುವುದರ ಮೂಲಕ ಸೋಂಕಿತರಿಗೆ ಅವಶ್ಯವಾಗಿರುವ ಪ್ರಾಣವಾಯು ಪೂರೈಸಿ ಮಾನವೀಯತೆ ಮೆರೆದಿದ್ದಾರೆ. ಕೊರೊನಾ ಜಾಗೃತಿ: ಉದ್ಯಮಿ ರಾಜು ಎಂ.ಬೋರಾ ನೇತೃತ್ವದ ಸರ್ವ ವಿಜಯಾ ಸೇವಾ ಸಂಸ್ಥೆಯ ಮೂಲಕ ಇಳಕಲ್ ನಗರದ ಪ್ರತಿಯೊಬ್ಬ ವೈದ್ಯರಿಂದಲೂ ಕೊರೊನಾ ವೈರಸ್ ಕುರಿತು ಸಾಕಷ್ಟು ಜಾಗೃತಿ ಮೂಡಿಸುವುದರ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ಭಯ ಬೇಡ, ಜಾಗೃತಿ ಇರಲಿ ಎಂದು ವೈದ್ಯರ ಮೂಲಕ ಜಾಗೃತಿ ಮೂಡಿಸಿ ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬರಿಗೆ ಪೂರೈಸುವುದರ ಮೂಲಕ ಜನರಿಗೆ ವಿಶೇಷವಾಗಿ ಕೊರೊನಾ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ವಾರಿಯರ್ಗಳಿಗೆ ದಾಸೋಹ: ವಾರಿಯರ್ ಗಳಾದ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ಸ್‌ಗಳಿಗೆ ಉದ್ಯಮಿ ಬೋರಾ ಅವರು ದಾಸೋಹ ವ್ಯವಸ್ಥೆ ಮಾಡುವುದರ ಮೂಲಕ ಕೊರೊನಾ ನಿಯಂತ್ರಣಕ್ಕಾಗಿ ನಿರಂತರ ಶ್ರಮಿಸುತ್ತಿರುವ ಫ್ರಂಟ್ ಲೈನ್ ವಾರಿಯರ್ಗಳಿಗೆ ಹೆಗಲಾಗಿದ್ದಾರೆ. ಟ್ಯಾಲೆಂಟ್ ಶೋ: ಸದ್ಯ ಲಾಕ್‌ಡೌನ್‌ದಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಜನರಿಗೆ ಮನೆಯಲ್ಲೇ ಇದ್ದು ಸಾಂಸ್ಕೃತಿಕ ರಸದೌತಣ ಸವಿಯಲು ವಿನೂತನ ಕಾರ್ಯಕ್ರಮ ಆರಂಭಿಸಿದ್ದಾರೆ. ಸರ್ವ ವಿಜಯ ಸೇವಾ ಸಂಸ್ಥೆಯಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸ್ಥಳಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆನ್ ಲೈನ್ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಳಿಸಿ ಸ್ಥಳಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಶೀಘ್ರ ಆಂಬ್ಯುಲೆನ್ಸ್ ಸೇವೆ: ವ್ಯಾಪಕವಾಗಿ ಹರಡು ತ್ತಿರುವ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಆದರೂ ಕೂಡಾ ಹಲವಾರು ಜನರಿಗೆ ಆಂಬ್ಯುಲೆನ್ಸ್ ಸಮಸ್ಯೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಮನಗಂಡ ಉದ್ಯಮಿ ರಾಜು ಎಂ.ಬೋರಾ ಎರಡು ಆಂಬ್ಯುಲೆನ್ಸ್ ಖರೀದಿಗೆ ಮುಂದಾಗಿದ್ದಾರೆ. ಅದನ್ನು ಶೀಘ್ರ ಆರೋಗ್ಯ ಇಲಾಖೆಯವರಿಗೆ ನೀಡುವ ಯೋಜನೆ ಹಾಕಿಕೊಂಡು ಮತ್ತೂಂದು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ .