Advertisement
ಉಡುಪಿಯ ಹೊಟೇಲ್‌ವೊಂದರ ಮಾಲಕರಿಗೆ “ನಾಳೆ ಮಧ್ಯಾಹ್ನ 12 ಗಂಟೆಗೆ ಇಂತಿಷ್ಟು ಪ್ಲೇಟ್ ತಿಂಡಿ ಬೇಕು’ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬರು ದರ ವಿಚಾರಿಸಿದ್ದಾರೆ. ಬಳಿಕ ಮುಂಗಡ ಹಣ ಎಷ್ಟು ಪಾವತಿಸಬೇಕು ಎಂದು ಸೂಚಿಸಿದ ಮೇರೆಗೆ ಹೊಟೇಲ್ ಮಾಲಕರು 1 ಸಾವಿರ ರೂ. ಹಾಕುವಂತೆ ತಿಳಿಸಿದ್ದರು. ಆದರೆ ಆ ವ್ಯಕ್ತಿ 10 ಸಾವಿರ ರೂ.ಗಳನ್ನು ಹಾಕಿದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿ ಕರೆ ಮಾಡಿ ಪ್ರಮಾದವಶತ್ 10 ಸಾವಿರ ರೂ.ಗಳನ್ನು ಹಾಕಿದ್ದೇನೆ. 9 ಸಾವಿರ ರೂ. ವಾಪಸ್ ಹಾಕುವಂತೆ ತಿಳಿಸಿದ್ದಾನೆ. ಆದರೆ ಇದಕ್ಕೆ ಹೊಟೇಲ್ ಮಾಲಕರು ಒಪ್ಪಲಿಲ್ಲ. ನಾಳೆ ಬಂದು ಪಡೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಕರೆ ಮಾಡಿದಾತ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ. ಮೊದಲಿಗೆ ಯಾರೋ ಸ್ಥಳೀಯ ಕಾರ್ಮಿಕರು ಅಂದುಕೊಂಡಿದ್ದ ಮಾಲಕರಿಗೆ ಅನಂತರ ಆತನ ಮಾತಿನಿಂದ ಇದು ವಂಚಕರ ಕೃತ್ಯ ಎಂಬುವುದು ತಿಳಿಯಿತು. ಅನಂತರ ಆ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಬಿಹಾರ ಲೊಕೇಷನ್ ತೋರಿಸುತ್ತಿತ್ತು.
Related Articles
ಈ ಹಿಂದೆ ನಡೆದ ಕೆಲವೊಂದು ವಂಚನೆ ಪ್ರಕರಣಗಳಲ್ಲಿ ಬಹುತೇಕ ಎಲ್ಲರಿಗೂ ಒಂದೇ ರೀತಿಯ ಸಂದೇಶಗಳು ಹೋಗುತ್ತಿದ್ದವು. ಆದರೆ ಈಗ ನಾವು ನಡೆಸುವ ಉದ್ಯಮದ ಬಗೆಯನ್ನು ವಂಚಕರು ತಿಳಿದುಕೊಂಡು ಅದಕ್ಕೆ ತಕ್ಕಂತೆ ನಮ್ಮೊಂದಿಗೆ ವ್ಯವಹಾರ ನಡೆಸಿ ಸಂದೇಶ ಕಳುಹಿಸಿ ವಂಚನೆ ನಡೆಸುವ ಅಂಶಗಳು ಬೆಳಕಿಗೆ ಬರುತ್ತಿವೆ. ಹೊಟೇಲ್ ಉದ್ಯಮ, ಪೆಟ್ರೋಲ್ ಬಂಕ್, ಮೆಡಿಕಲ್ ಫಾರ್ಮಸಿ, ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿರುವವರು ಸಹಿತ ವಿವಿಧ ಉದ್ಯಮ ಹಾಗೂ ಉದ್ಯಮಿಗಳನ್ನು ಟಾರ್ಗೆಟ್ ಮಾಡಿಕೊಂಡು ಇಂತಹ ನಕಲಿ ಸಂದೇಶ ಕಳುಹಿಸಿ ವಂಚಿಸುವ ಘಟನೆಗಳೂ ನಡೆಯುತ್ತಿವೆ.
Advertisement
ತರಾತುರಿ ಬೇಡಇಂತಹ ಸಂದೇಶಗಳು ಬಂದಾಗ ಇವುಗಳನ್ನು ಆದಷ್ಟು ನಿರ್ಲಕ್ಷಿಸುವುದೇ ಉತ್ತಮ. ಈ ಹಿಂದೆ ಇಂತಹ ಸಂದೇಶಗಳನ್ನು ಕ್ಲಿಕ್ಕಿಸಿದರೆ ಮಾತ್ರ ಹಣ ವಂಚಕರ ಪಾಲಾಗುತ್ತಿತ್ತು. ಆದರೆ ಈಗ ಹಣ ನಿಮ್ಮ ಖಾತೆಗೆ ಜಮೆಯಾಗಿದೆ ಎಂಬ ಸಂದೇಶ ಬಂದು ಅನಂತರ ವ್ಯಕ್ತಿಯೊಬ್ಬರು ಕರೆ ಮಾಡಿ ತಪ್ಪಾಗಿ ಬಂದಿದೆ. ಅದನ್ನು ವಾಪಾಸ್ ಹಾಕಿ ಅನ್ನುತ್ತಾರೆ. ನಮ್ಮ ಪರಿಚಯದವರು ಅಥವಾ ಸಂಪರ್ಕದಲ್ಲಿರುವವರಾದರೆ ಪರವಾಗಿಲ್ಲ. ಅನ್ಯರು ಈ ರೀತಿ ಕರೆ ಮಾಡಿದರೆ ಮೊದಲಿಗೆ ಆ ಹಣ ನಮ್ಮ ಖಾತೆಗೆ ನಿಜವಾಗಿಯೂ ಜಮೆ ಆಗಿದೆಯಾ ಅಥವಾ ಅವರು ಸುಳ್ಳು ಹೇಳುತ್ತಿದ್ದಾರೆಯಾ ಎಂಬುವುದನ್ನು ಪರಿಶೀಲನೆ ನಡೆಸುವುದು ಉತ್ತಮ ಎಂಬುವುದು ಪೊಲೀಸರ ಅಭಿಪ್ರಾಯ. ನಮಗೆ ಮಾಹಿತಿ ನೀಡಿ
ಅನಾಮಧೇಯ ಲಿಂಕ್‌ಗಳನ್ನು ಯಾವ ಉದ್ದೇಶಕ್ಕೂ ಕ್ಲಿಕ್ ಮಾಡಬಾರದು. ಈಗಾಗಲೇ ಹಲವಾರು ಮಂದಿ ಇಂತಹ ತಪ್ಪುಗಳನ್ನು ಮಾಡಿ ಲಕ್ಷಾಂತರ ರೂ. ಕಳೆದುಕೊಂಡವರಿದ್ದಾರೆ. ಜನರು ಸ್ವಯಂ ಜಾಗೃತರಾಗಿರುವುದೇ ಇದಕ್ಕೆ ಉತ್ತಮ ಪರಿಹಾರವಾಗಿದೆ. ಇಂತಹ ಸಂದೇಶಗಳ ಬಗ್ಗೆ ಅನುಮಾನಗಳು ಇದ್ದರೆ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಬಹುದು.
– ರಾಮಚಂದ್ರ ನಾಯಕ್,
ಪೊಲೀಸ್ ನಿರೀಕ್ಷಕರು, ಸೆನ್ ಠಾಣೆ