ಸೋವಿಯತ್ ರಷ್ಯಾ ಮೊತ್ತ ಮೊದಲ ಮಾನವ ಸಹಿತ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡಾಯಿಸುವ 300 ವರ್ಷ ಮೊದಲೇ ಇಂಗ್ಲೆಂಡ್ನಲ್ಲಿ ಅಂತರಿಕ್ಷ ಯಾನದ ಕುರಿತು ರೂಪುರೇಷೆಗಳು ತಯಾರಾಗಿದ್ದವು. ಅದರ ಹಿಂದಿದ್ದ ವಿಜ್ಞಾನಿ ಡಾ. ಜಾನ್ ವಿಲ್ಕಿನ್ಸ್. ಆತನ ಈ ಮಹತ್ವಾಕಾಂಕ್ಷಿ ಯೋಜನೆ ವೈಜ್ಞಾನಿಕವಾಗಿರಲಿಲ್ಲ. ಆತನ ತನ್ನದೇ ಆದ ಸಿದ್ದಾಂತಗಳನ್ನು ಹೊಂದಿದ್ದ ವ್ಯಕ್ತಿ. ಆತನ ಅಂತರಿಕ್ಷ ವಾಹನ ಸ್ಪ್ರಿಂಗು, ರೆಕ್ಕೆಗಳಿಂದ ನಿರ್ಮಾಣವಾಗಿತ್ತು. ಭೂಮಿಯ ಗುರುತ್ವಾಕರ್ಷಣಾ ಶಕ್ತಿ ಮೇಲಕ್ಕೆ 20 ಮೈಲಿಗಳಷ್ಟು ಮಾತ್ರವೇ ಇರುತ್ತದೆ, ಅದನ್ನು ದಾಟಲು ಸಾಧ್ಯವಾದರೆ ನಾವು ಚಂದ್ರನನ್ನು ತಲುಪಬಹುದು ಎನ್ನುವುದು ಅವನ ನಂಬಿಕೆಯಷ್ಟೇ ಆಗಿರಲಿಲ್ಲ, ಲೆಕ್ಕಾಚಾರವಾಗಿತ್ತು! ಆತ ತಯಾರಿಸಿದ್ದ ಅಂತರಿಕ್ಷವಾಹನ ಮದ್ದುಗುಂಡುಗಳನ್ನೂ ಹೊಂದಿತ್ತು. ಆಗಿನ ಕಾಲದಲ್ಲಿ ತನ್ನ ಓರಗೆಯವರ ಯಶಸ್ವಿ ಸಮುದ್ರಯಾನಗಳಿಂದ ಪ್ರೇರಣೆ ಪಡೆದಿದ್ದ ವಿಲ್ಕಿನ್ಸ್ ತಾನು ಅವರೆಲ್ಲರಿಗಿಂತ ಭಿನ್ನವಾದ ಯಾನವನ್ನು ಕೈಗೊಳ್ಳುತ್ತೇನೆ ಎಂಬ ಹಠದಿಂದಲೇ ಚಂದ್ರಯಾನ ಯೋಜನೆಯನ್ನು ರೂಪಿಸಿದ್ದ. ದೇವರು ಗ್ರಹಗಳನ್ನು ಸೃಷ್ಟಿಸಿದ್ದರೆ ಅದರಲ್ಲಿ ಖಂಡಿತವಾಗಿಯೂ ಜೀವಿಗಳನ್ನು ಸೃಷ್ಟಿಸಿರುತ್ತಾನೆ ಎನ್ನುವುದು ಅವನ ಖಚಿತವಾದ ಅಬಿಪ್ರಾಯವಾಗಿತ್ತು. ಹೀಗಾಗಿ ತನ್ನ ಚಂದ್ರಯಾನ ಯೊಜನೆಯಲ್ಲಿ ಅನ್ಯಗ್ರಹಜೀವಿಗಳೊಂದಿಗೆ ಮಾತುಕತೆ ನಡೆಸುವುದರ ಕುರಿತೂ ಪ್ರಸ್ತಾಪ ಮಾಡಿದ್ದ. ಅವುಗಳೊಂದಿಗೆ ವ್ಯಾಪಾರ ಕೈಗೊಳ್ಳುವ ಬಗ್ಗೆಯೂ ವಿವರವಾಗಿ ನಿಯಮಾವಳಿಗಳನ್ನು ಸ್ಪಷ್ಟವಾಗಿ ಬರೆದಿದ್ದ. ಆದರೆ ಆ ಸಮಯದಲ್ಲಿ ವಿಜ್ಞಾನಿಗಳಿಬ್ಬರು ಭೂಮಿ ಮತ್ತು ಚಂದ್ರ ಎರಡರ ನಡುವೆ ನಿರ್ವಾತ ಪ್ರದೇಶವಿರುತ್ತದೆ ಎಂಬ ಸಿದ್ದಾಂತವನ್ನು ಸಾಬೀತುಪಡಿಸಿದಾಗ ವಿಲ್ಕಿನ್ಸ್ ಅಂದುಕೊಂಡಿದ್ದೆಲ್ಲವೂ ಸುಳ್ಳೆಂದು ತಿಳಿದುಬಂದು ಅವನ ಚಂದ್ರಯಾನ ಯೋಜನೆ ಮಕಾಡೆ ಮಲಗಿತ್ತು.