Advertisement

ಕೆಲವು ವ್ಯಾಪಾರಿಗಳಿಂದ ವ್ಯವಹಾರ ಪುನರಾರಂಭ

11:19 AM Sep 28, 2020 | Suhan S |

ಮಹಾನಗರ, ಸೆ. 27: ನಗರದ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡದಲ್ಲಿ ಕೆಲವು ಮಂದಿ ವ್ಯಾಪಾರಸ್ಥರು ವ್ಯವಹಾರವನ್ನು ಪುನರಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಂಗಡಿ ಗಳು ಆರಂಭವಾಗುವ ನಿರೀಕ್ಷೆ ಇದೆ.

Advertisement

ಕೊರೊನಾ ಲಾಕ್‌ಡೌನ್‌ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸೆಂಟ್ರಲ್‌ ಮಾರುಕಟ್ಟೆಯನ್ನು ದಿಢೀರನೆ ಮುಚ್ಚಿರುವುದನ್ನು  ಪ್ರಶ್ನಿಸಿ ವ್ಯಾಪಾರಿಗಳು ಹೈಕೋರ್ಟ್‌ನ ಮೊರೆ ಹೋಗಿದ್ದು, ವ್ಯಾಪಾರಿಗಳ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲ ಯವು, ವ್ಯಾಪಾರಿಗಳಿಗೆ ಸೂಕ್ತ ಕಾಲಾವಕಾಶ ನೀಡದೆ ಏಕಾಏಕಿ ಮಾರ್ಕೆಟ್‌ ಮುಚ್ಚಿರುವ ಕ್ರಮ ಸರಿಯಲ್ಲ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಸದ್ಯದ ಮಟ್ಟಿಗೆ ವ್ಯಾಪಾರ ವ್ಯವಹಾರ ಪುನರಾರಂಭಿಸಲು ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್‌ ನಿರ್ದೇಶನದಂತೆ, ಈ ಹಿಂದೆ ಅಲ್ಲಿ ವ್ಯಾಪಾರ ಮಾಡುತ್ತಿದ್ದ ಅಧಿಕೃತ ವ್ಯಾಪಾರಿಗಳ ಪಟ್ಟಿ ಮಾಡಲು ನಿರ್ಧರಿಸಿ, ಈಗಾಗಲೇ ಸಂಬಂಧ ಪಟ್ಟ ವ್ಯಾಪಾರಸ್ಥರಿಂದ ದಾಖಲೆ ಪತ್ರಗಳನ್ನು ಸಂಗ್ರಹಿಸಿದೆ.

ಈ ನಡುವೆ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡದಲ್ಲಿ ಕೆಲವು ಮಂದಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಒಂದೊಂದಾಗಿ ತೆರೆದು ವ್ಯವಹಾರವನ್ನು ಪುನರಾರಂಭ ಮಾಡುತ್ತಿದ್ದಾರೆ. ಆದರೆ ಮಾರ್ಕೆಟ್‌ನ ಒಳ ಭಾಗದ ಅಂಗಡಿಗಳಿಗೆ ಹೋಗುವ ದ್ವಾರವನ್ನು ಇನ್ನೂ ತೆರೆದಿಲ್ಲ. ಕಟ್ಟಡದ ಹೊರ ಭಾಗದಲ್ಲಿ ಇರುವ ಕೆಲವು ಅಂಗಡಿಗಳ ವ್ಯಾಪಾರಿಗಳು ಮಾತ್ರ ವ್ಯವಹಾರ ನಡೆಸುತ್ತಿದ್ದಾರೆ.

ಮಾರ್ಕೆಟ್‌ ಕಟ್ಟಡದ ವಿದ್ಯುತ್‌ ಮತ್ತು ನೀರಿನ ಸಂಪರ್ಕವನ್ನು ಮಹಾನಗರ ಪಾಲಿಕೆ ಈ ಹಿಂದೆ ಕಡಿತ ಮಾಡಿದ್ದು, ಅದನ್ನು ಇನ್ನಷ್ಟೇ ಪುನಃಸ್ಥಾಪಿಸ ಬೇಕಾಗಿದೆ. ಈ ಬಗ್ಗೆ ಸೋಮವಾರ ವ್ಯಾಪಾರಿಗಳ ನಿಯೋಗವೊಂದು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಿದೆ.

“ಎಪಿಎಂಸಿ ಪ್ರಾಂಗಣದಲ್ಲಿ ಮನಸೋ ಇಚ್ಛೆ ವ್ಯಾಪಾರಕ್ಕೆ ಅವಕಾಶವಿಲ್ಲ’ : ಬೈಕಂಪಾಡಿ: ಆರು ತಿಂಗಳುಗಳಿಂದ ನಗರದ ಸೆಂಟ್ರಲ್‌ ಮಾರುಕಟ್ಟೆಯಿಂದ ಸ್ಥಳಾಂತರಗೊಂಡು ಬೈಕಂಪಾಡಿ ಎಪಿಎಂಸಿ ಯಾರ್ಡ್‌ನಲ್ಲಿ ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಎಲ್ಲ ಮೂಲಸೌಕರ್ಯ ಒದಗಿಸಿದ್ದರೂ ವ್ಯಾಪಾರಿಗಳು ಒಮ್ಮೆ ಸೆಂಟ್ರಲ್‌ ಮಾರುಕಟ್ಟೆ, ಮತ್ತೂಮ್ಮೆ ಬೈಕಂಪಾಡಿ ಯಾರ್ಡ್‌ ಎಂದು ಮನಬಂದಂತೆ ವ್ಯಾಪಾರ ನಡೆಸುತ್ತಿರುವುದು ಸರಿಯಲ್ಲ. ಹೀಗಾದಲ್ಲಿ ಎಪಿಎಂಸಿ ತನ್ನ ನಿರ್ಧಾರವನ್ನು ಪುನರ್‌ವಿಮರ್ಶೆ ನಡೆಸಬೇಕಾಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಎಚ್ಚರಿಸಿದ್ದಾರೆ.

Advertisement

ಮಹಾನಗರ ಪಾಲಿಕೆ-ಜಿಲ್ಲಾಡಳಿತ ಮತ್ತು ನ್ಯಾಯಾಲಯದ ಆದೇಶಗಳಾನುಸಾರ ವ್ಯಾಪಾರಸ್ಥರು ಎಪಿಎಂಸಿಯ ಪ್ರಾಂಗಣದಲ್ಲಿ ವ್ಯಾಪಾರ ಮುಂದುವರಿಸುವ ಬಗ್ಗೆ ಗೊಂದಲದಲ್ಲಿದ್ದಾರೆ. ಸಮಸ್ಯೆ ಬಂದಾಗ ಮಾತ್ರ ಎಪಿಎಂಸಿಗೆ ಧಾವಿಸಿ ಲಗ್ಗೆ ಇಡುವುದು ಎಷ್ಟು ಸರಿ ಎಂಬುದನ್ನು ವ್ಯಾಪಾರಸ್ಥರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾನೂನು ಮತ್ತು ನಿಯಮದಂತೆ ವ್ಯವಹಾರ ನಡೆಸಬೇಕಾಗಿದೆ. ನಿಗದಿತ ದಿನಗಳೊಳಗೆ ಈಗಾಗಲೇ ಗೋದಾಮು ಹಂಚಿಕೆಗೆ ಪಡೆದುಕೊಂಡ ಅರ್ಜಿ ಫಾರಂಗಳನ್ನು ಪೂರಕ ದಾಖಲೆಗಳು ಐಡಿಗೆ ನಿಗದಿಪಡಿಸಲಾದ ಮೊತ್ತವನ್ನು ವಿಳಂಬ ಮಾಡದೆ ಡಿ.ಡಿ. ಮೂಲಕ ಪಾವತಿಸಲು ಅವಕಾಶ ನೀಡಿದ್ದೇವೆ ಎಂದು ತಿಳಿಸಿದರು.

ಹೈಕೋರ್ಟ್‌ ಆದೇಶದ ಪ್ರಕಾರ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಅಧಿಕೃತವಾಗಿ ಟ್ರೇಡ್‌ ಲೈಸನ್ಸ್‌ ಇರುವವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದೆ ಅಲ್ಲಿ  ವ್ಯಾಪಾರ ಮಾಡುತ್ತಿದ್ದವರಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ನೀಡುವಂತೆ ಸೂಚಿಸಲಾಗಿದೆ. ಈಗಾಗಲೇ ವ್ಯಾಪಾರಿಗಳು ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಿದ್ದು, ಮಹಾನಗರ ಪಾಲಿಕೆಯು ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ.-ಡಾ| ರಾಜೇಂದ್ರ ಕೆ.ವಿ.,  ಡಿಸಿ

ಹೈಕೋರ್ಟ್‌ ಸೂಚನೆಯಂತೆ  ಸೆಂಟ್ರಲ್‌ ಮಾರ್ಕೆಟ್‌ನಲ್ಲಿ  ವ್ಯಾಪಾರವನ್ನು ಪುನರಾರಂಭಿಸುತ್ತಿದ್ದೇವೆ. ಮನಪಾ ಕೋರಿಕೆಯ ಮೇರೆಗೆ  ಈಗಾಗಲೇ ವ್ಯಾಪಾರಿಗಳು ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಿದ್ದಾರೆ. ಮಾರ್ಕೆಟ್‌ನ ವಿದ್ಯುತ್‌, ನೀರಿನ ಸಂಪರ್ಕವನ್ನು ಪುನರ್‌ ಸ್ಥಾಪಿಸುವಂತೆ ಸೋಮವಾರ ವ್ಯಾಪಾರಿಗಳ ನಿಯೋಗವೊಂದು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಲಿದೆ. -ಹಸನ್‌ ಕೆಮ್ಮಿಂಜೆ, ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಹಂಗಾಮಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next