Advertisement

ತಿಂಗಳಾಂತ್ಯಕ್ಕೆ ಬಸ್‌ಗಳಲ್ಲಿ “ಸ್ಮಾರ್ಟ್‌ ಕಾರ್ಡ್‌’

12:12 PM Jan 11, 2017 | |

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಬಹು ನಿರೀಕ್ಷಿತ “ಸ್ಮಾರ್ಟ್‌ ಕಾರ್ಡ್‌’ ಬಳಕೆಗೆ ಕೊನೆಗೂ ಕಾಲ ಕೂಡಿಬಂದಿದೆ. ತಿಂಗಳಾಂತ್ಯಕ್ಕೆ ಬೆಂಗಳೂರಿನ “ಲೈಫ್ಲೈನ್‌’ ಬಿಎಂಟಿಸಿ ಬಸ್‌ ನಗದು ರಹಿತ ಪ್ರಯಾಣಕ್ಕೆ ತೆರೆದುಕೊಳ್ಳಲಿದೆ. 

Advertisement

ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಯೋಜನೆ ಈಗ ಅಂತಿಮ ಹಂತದಲ್ಲಿದ್ದು, ಜನವರಿ ಅಂತ್ಯಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಬಸ್‌ಗಳಲ್ಲಿ ಸ್ಮಾರ್ಟ್‌ ಕಾರ್ಡ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಪರೀಕ್ಷಾರ್ಥವಾಗಿ 20 ಬಸ್‌ಗಳಲ್ಲಿ ಈ ಪ್ರಯೋಗ ನಡೆಸಲಿದ್ದು, ಫೆಬ್ರವರಿ ಅಂತ್ಯಕ್ಕೆ ಎಲ್ಲ ಬಸ್‌ಗಳಿಗೂ ಈ ಸೌಲಭ್ಯ ವಿಸ್ತರಿಸಲು ಉದ್ದೇಶಿಸಿದೆ. 

ಆರಂಭದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣ ಅಥವಾ ಶಿವಾಜಿನಗರ ನಿಲ್ದಾಣದಿಂದ ಯಾವುದಾದರೂ ಎರಡು ಮಾರ್ಗಗಳಲ್ಲಿ ಇದನ್ನು ಪರಿಚಯಿಸಲು ಚಿಂತನೆ ನಡೆದಿದೆ. ಬಹುತೇಕ ಐಟಿಪಿಎಲ್‌ ಮಾರ್ಗದಲ್ಲಿನ ವೋಲ್ವೋ ಬಸ್‌ಗಳಲ್ಲಿ ಸ್ಮಾರ್ಟ್‌ ಕಾರ್ಡ್‌ಗಳನ್ನು ಪರಿಚಯಿಸುವ ಆಲೋಚನೆ ಇದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಎಲ್ಲೆಡೆ “ಕ್ಯಾಷ್‌ಲೆಸ್‌’ ವ್ಯವಹಾರ ಕೇಳಿಬರುತ್ತಿರುವ ಸಂದರ್ಭದಲ್ಲೇ ನಗದುರಹಿತ ಪ್ರಯಾಣ ಜನರಿಗೆ ವರವಾಗಲಿದೆ. 

ನೂತನ ವ್ಯವಸ್ಥೆಯಲ್ಲಿ ಪ್ರಯಾಣಿಕರು ಮಾಡಬೇಕಾದ್ದಿಷ್ಟೇ- ಬಸ್‌ ಏರಿದ ತಕ್ಷಣ ಬಿಎಂಟಿಸಿ ನೀಡಿದ ಸ್ಮಾರ್ಟ್‌ ಕಾರ್ಡ್‌ ಅನ್ನು ನಿರ್ವಾಹಕರಿಗೆ ನೀಡಬೇಕು. ಅವರು ಆ ಕಾರ್ಡ್‌ನ್ನು ತಮ್ಮ ಬಳಿ ಇರುವ ಇಟಿಎಂ (ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌) ಮೇಲೆ ಟ್ಯಾಪ್‌ ಮಾಡುತ್ತಾರೆ. ನಂತರ ಎಲ್ಲಿಂದ ಎಲ್ಲಿಗೆ ಎಂದು ಮಾರ್ಗವನ್ನು ಎಂಟ್ರಿ ಮಾಡುತ್ತಾರೆ. ಆಗ ಟಿಕೆಟ್‌ ಬರುತ್ತದೆ. ಹಾಗಾಗಿ, ಚಿಲ್ಲರೆ ಸಮಸ್ಯೆಯೇ ಇಲ್ಲಿ ಬರುವುದಿಲ್ಲ ಎಂದು ಬಿಎಂಟಿಸಿ ತಾಂತ್ರಿಕ ವಿಭಾಗದ ವ್ಯವಸ್ಥಾಪಕರೊಬ್ಬರು ಮಾಹಿತಿ ನೀಡಿದರು. 

ಫೆಬ್ರವರಿ ಅಂತ್ಯದೊಳಗೆ ಎಲ್ಲೆಡೆ?: ಸ್ಮಾರ್ಟ್‌ ಕಾರ್ಡ್‌ ಐಟಿಎಸ್‌ (ಚತುರ ಸಾರಿಗೆ ವ್ಯವಸ್ಥೆ)ಯ ಒಂದು ಭಾಗ. ಐಟಿಎಸ್‌ ಸಮರ್ಪಕ ಅನುಷ್ಠಾನದ ಬೆನ್ನಲ್ಲೇ ಇದನ್ನು ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಈಗ ಅದು ಸಾಕಾರಗೊಳ್ಳುತ್ತಿದೆ. ಜನವರಿ ಅಂತ್ಯಕ್ಕೆ ಪ್ರಾಯೋಗಿಕವಾಗಿ 10ರಿಂದ 20 ಶೆಡ್ಯುಲ್‌ಗ‌ಳಿರುವ ಬಸ್‌ಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ನಂತರ ಫೆಬ್ರವರಿ ಅಂತ್ಯದೊಳಗೆ ಉಳಿದೆಡೆ ವಿಸ್ತರಿಸಲಾಗುವುದು. ಹೊಸ ಹಣಕಾಸು ವರ್ಷಕ್ಕೆ ಬಿಎಂಟಿಸಿ ಬಸ್‌ಗಳು ನೂರಕ್ಕೆ ನೂರರಷ್ಟು ನಗದುರಹಿತ ಪ್ರಯಾಣಕ್ಕೆ ತೆರೆದುಕೊಳ್ಳಲಿದೆ ಎಂದು ನಿಗಮದ ವ್ಯವಸ್ಥಾಪಕಿ ಡಾ.ಏಕರೂಪ್‌ ಕೌರ್‌ “ಉದಯವಾಣಿ’ಗೆ ತಿಳಿಸಿದರು.  

Advertisement

ಆರು ಸಾವಿರ ಬಸ್‌ಗಳಿಗೆ ಈಗಾಗಲೇ ಹತ್ತು ಸಾವಿರ ಇಟಿಎಂಗಳು ಇವೆ (ಎರಡು-ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ವಾಗುವಂತೆ ಖರೀದಿಸಲಾಗಿದೆ). ಈ ಎಲ್ಲಾ ಯಂತ್ರಗಳಲ್ಲೂ ಸ್ಮಾರ್ಟ್‌ ಕಾರ್ಡ್‌ ಬಳಸುವ ಸೌಲಭ್ಯ ಇದೆ. ಇನ್ನು ಸ್ಮಾರ್ಟ್‌ ಕಾರ್ಡ್‌ಗಳು ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಮಾದರಿಯಲ್ಲೇ ಇರುತ್ತವೆ. ಮೊಬೈಲ್ ರಿಚಾರ್ಜ್‌ ಮಾಡುವ ಮಾದರಿಯಲ್ಲಿ ಹಣ ನೀಡಿ ಈ ಕಾರ್ಡ್‌ ಅನ್ನು ಆ್ಯಕ್ಸಿಸ್‌ ಬ್ಯಾಂಕ್‌ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್‌ ಅಪ್‌ ಮಾಡಿಕೊಳ್ಳಬೇಕು (ಕನಿಷ್ಠ-ಗರಿಷ್ಠ ಮೊತ್ತ ಇನ್ನೂ ನಿಗದಿಯಾಗಿಲ್ಲ). ಕಾರ್ಡ್‌ದಾರರು ಪ್ರಯಾಣ ಮಾಡಿದಂತೆ ಹಣ ಕಡಿತವಾಗುತ್ತಾ ಹೋಗುತ್ತದೆ ಎಂದು ವಿವರಿಸಿದರು. 

ಶಾಪಿಂಗ್‌ಗೂ ಬಳಕೆ: ಆಕ್ಸಿಸ್‌ ಬ್ಯಾಂಕ್‌ ಸಹಯೋಗದಲ್ಲಿ ಈ ಕಾರ್ಡ್‌ ಅನ್ನು ಹೊರತಂದಿದೆ. ಈ ಸ್ಮಾರ್ಟ್‌ ಕಾರ್ಡ್‌ ಬಸ್ಸುಗಳಲ್ಲಿ ಪ್ರಯಾಣಿಸಲು ಮಾತ್ರ ಅಲ್ಲ. ಮುಂದಿನ ಹಂತಗಳಲ್ಲಿ ಮೆಟ್ರೋ ರೈಲಿನಲ್ಲಿ, ಶಾಪಿಂಗ್‌, ಕ್ಯಾಬ್‌, ಹೋಟೆಲ್‌ ವಹಿವಾಟಿನಲ್ಲೂ ಇದನ್ನು ವಿಸ್ತರಿಸಲಾಗುವುದು. ದೇಶದ ಸುಮಾರು 12 ಲಕ್ಷ ಮಳಿಗೆಗಳಲ್ಲಿ ಇದನ್ನು ಬಳಸಿ ಶಾಪಿಂಗ್‌ ಅವಕಾಶ ಕಲ್ಪಿಸಲಾಗುತ್ತಿದೆ. 

ದಿನದ ಪಾಸು ಇರಲಿದೆ: ಮುಂದಿನ ದಿನಗಳಲ್ಲಿ ಇ-ಪರ್ಸ್‌ ಮತ್ತು ಪಾಸು ಎಂದು ಎರಡು ಪ್ರಕಾರಗಳು ಇರುತ್ತವೆ. ಇ-ಪರ್ಸ್‌ನಲ್ಲಿ ಸ್ಮಾರ್ಟ್‌ ಕಾರ್ಡ್‌ ಬಳಸಿ ಪ್ರಯಾಣಿಸಿದರೆ, ಪಾಸುಗಳಿಗೆ ಈಗಿರುವ ವ್ಯವಸ್ಥೆ ಮುಂದುವರಿಯಲಿದೆ. ಇದಲ್ಲದೆ, ದಿನದ ಪಾಸುಗಳು ಕೂಡ ಲಭ್ಯ ಇರುತ್ತವೆ. 

ಕಾರ್ಡ್‌ ಸ್ವೆ„ಪ್‌ ಮಾಡಿ ಪಾಸ್‌  ಪಡೆದವರು 35 ಸಾವಿರ ಮಂದಿ!
ಈ ಮಧ್ಯೆ ಈಗಾಗಲೇ ಬಹುತೇಕ ಎಲ್ಲಾ ಟಿಟಿಎಂಸಿ, ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಪಿಒಎಸ್‌ (ಪಾಯಿಂಟ್‌ ಆಫ್ ಸೇಲ್‌) ಯಂತ್ರಗಳನ್ನು ಹೊಸ ವರ್ಷದಿಂದ ಪರಿಚಯಿಸಿದ್ದು, ಮೊದಲ ತಿಂಗಳಲ್ಲೇ ಪಿಒಎಸ್‌ ಮೂಲಕ ಹಣ ಪಾವತಿಸಿ, 35 ಸಾವಿರ ಪಾಸುಗಳನ್ನು ಜನ ಪಡೆದಿದ್ದಾರೆ.ತಿಂಗಳಿಗೆ 2.75 ಲಕ್ಷ ವಿವಿಧ ಪ್ರಕಾರದ ಮಾಸಿಕ ಪಾಸುಗಳು ವಿತರಣೆ ಆಗುತ್ತವೆ. ಇದರಲ್ಲಿ 35 ಸಾವಿರ ಪಿಒಎಸ್‌ ಬಳಸಿ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿತ್ಯ ಬಿಎಂಟಿಸಿ ಬಸ್‌ಗಳಲ್ಲಿ 45ರಿಂದ 50 ಲಕ್ಷ ಜನ ಪ್ರಯಾಣಿಸುತ್ತಾರೆ ಎಂಬ ಅಂದಾಜಿದೆ. 

ಹೈಲೈಟ್ಸ್‌
1. ನಮ್ಮ ಮೆಟ್ರೋ’ ಕಾರ್ಡ್‌ನಂತೆ ಇರುತ್ತೆ ಬಿಎಂಟಿಸಿ ಸ್ಮಾರ್ಟ್‌ಕಾರ್ಡ್‌.
2. ಈ ಕಾರ್ಡ್‌ ಕಂಡಕ್ಟರ್‌ಗೆ ಕೊಟ್ಟರೆ ಅವರು, ತಮ್ಮ ಇಟಿಎಂನಲ್ಲಿ ಉಜ್ಜಿ ಟಿಕೆಟ್‌ ಕೊಡ್ತಾರೆ.
3. ಬಿಎಂಟಿಸಿ ಕೇಂದ್ರ ಇಲ್ಲವೇ ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ಕಾರ್ಡ್‌ ಟಾಪ್‌ಅಪ್‌ ಸೇವೆ ಲಭ್ಯ.
4. ಈ ಕಾರ್ಡ್‌ ಬಳಸಿ ಮೆಟ್ರೋ ರೈಲು, ಶಾಪಿಂಗ್‌, ಕ್ಯಾಬ್‌, ಹೋಟೆಲ್‌ ಸೇರಿ 12 ಲಕ್ಷ ಮಳಿಗೆಯಲ್ಲಿ ವಹಿವಾಟಿಗೆ ಅವಕಾಶ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next