ಉಳ್ಳಾಲ: ತಲಪಾಡಿ ನಾಗರಿಕರು ಬುಧವಾರ ಟೋಲ್ ಎದುರು ನಡೆಸಿದ ಪ್ರತಿಭಟನೆ ಮತ್ತು ಮಾನವ ಸರಪಳಿಯ ಸಾಂಕೇತಿಕ ಹೋರಾಟಕ್ಕೆ ಜಯ ಸಿಕ್ಕಿದ್ದು, ಗುರುವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಸ್ ಮಾಲಕರು, ಹೆದ್ದಾರಿ ಪ್ರಾಧಿಕಾರ, ಟೋಲ್ ಅಧಿಕಾರಿಗಳು ಮತ್ತು ತಲಪಾಡಿ ನಾಗರಿಕರ ನಡುವೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿದ ಟೋಲ್ ಪಾವತಿಗೆ ಬಸ್ ಮಾಲಕರು ಒಪ್ಪಿದ್ದು ಶುಕ್ರವಾರದಿಂದ ತಲಪಾಡಿ ಟೋಲ್ ದಾಟಿ ಕೇರಳ ಗಡಿ ಭಾಗವಾದ ಮೇಲಿನ ತಲಪಾಡಿಗೆ ಖಾಸಗಿ ಬಸ್ ಸಂಚಾರ ಆರಂಭಗೊಳ್ಳಲಿದೆ.
ಮಂಗಳೂರಿನಿಂದ ತಲಪಾಡಿಗೆ ಸಂಚರಿಸುವ ಬಸ್‌ಗಳು ಟೋಲ್ ಗೇಟ್ ದಾಟಿ ತಲಪಾಡಿ – ಕೇರಳ ಗಡಿಯಲ್ಲಿರುವ ಮೇಲಿನ ತಲಪಾಡಿಯ ನಿಲ್ದಾಣಕ್ಕೆ ಸಂಚರಿಸಬೇಕು ಎಂದು ತಲಪಾಡಿ ನಾಗರಿಕ ಸಮಿತಿ ಆಶ್ರಯದಲ್ಲಿ ಟೋಲ್ ಎದುರು ಪ್ರತಿಭಟನೆ ಮತ್ತು ಬಸ್‌ಗಳನ್ನು ಟೋಲ್ ದಾಟಿಸಿ ಪ್ರತಿಭಟನೆ ನಡೆಸಿದ್ದರು.
ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ಕದ್ರಿಯಲ್ಲಿರುವ ಮನಪಾ ವಿಭಾಗೀಯ ಕಚೇರಿಯಲ್ಲಿ ಸಭೆ ಕರೆದಿದ್ದು, ಬಸ್ ಮಾಲಕರು, ಹೆದ್ದಾರಿ ಪ್ರಾಧಿಕಾರ, ಟೋಲ್ ಅಧಿಕಾರಿಗಳು ಮತ್ತು ತಲಪಾಡಿ ನಾಗರಿಕರು ಭಾಗವಹಿಸಿದ್ದರು. ಬಸ್‌ಗಳಿಗೆ ಮಾಸಿಕ 28 ಸಾವಿರ ರೂ. ಟೋಲ್ ಶುಲ್ಕ ಪಾವತಿಸುವಂತೆ ಪಟ್ಟು ಹಿಡಿದಿದ್ದು, ಖಾಸಗಿ ಬಸ್ ಮಾಲಕರು 6 ಸಾವಿರ ರೂ.
ಪಾವತಿಸಲು ಸಿದ್ಧರಿದ್ದರು. ಬಳಿಕ ಜಿಲ್ಲಾಧಿಕಾರಿ ಮಾತನಾಡಿ ಮಾಸಿಕ 14 ಸಾವಿರ ರೂ. ಪಾವತಿಸುವಂತೆ ಬಸ್ ಮಾಲಕರಿಗೆ ಸೂಚಿಸಿದ್ದು ಇದಕ್ಕೆ ಟೋಲ್ ಅಧಿಕಾರಿಗಳು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮ್ಮತಿ ಸೂಚಿಸಿದರು.
ನಾಗರಿಕರ ಪರವಾಗಿ ಜಿ.ಪಂ. ಮಾಜಿ ಸದಸ್ಯ ವಿನಯ ನಾಯ್ಕ ಮತ್ತು ಸಿದ್ಧಿಕ್ ತಲಪಾಡಿ ಆಹವಾಲು ಮಂಡಿಸಿದರು. ಹೆದ್ದಾರಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಶಿಶುಮೋಹನ್, ಟೋಲ್ ಪ್ರಬಂಧಕ ಶಿವಪ್ರಸಾದ್ ಶೆಟ್ಟಿ, ಖಾಸಗಿ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲ್‌ರಾಜ್ ಆಳ್ವ ಮೊದಲಾದವರಿದ್ದರು.
2 ರೂ. ಹೆಚ್ಚುವರಿ ಪ್ರಯಾಣ ದರ ;
ಟೋಲ್ ದಾಟಿ ಕೇರಳ ಗಡಿಗೆ ಸಂಚರಿಸುವ ಪ್ರಯಾಣಿಕರಿಗೆ ಶುಕ್ರವಾರದಿಂದ 2 ರೂ. ಹೆಚ್ಚು ಟಿಕೆಟ್ ದರ ನಿಗದಿಯಾಗಲಿದೆ. ತಲಪಾಡಿಯಿಂದ ತೊಕ್ಕೊಟ್ಟು ಮತ್ತು ಮಂಗಳೂರು ವರೆಗೆ ಸಂಚರಿಸುವವರಿಗೆ ಈ ದರ ಅನ್ವಯಿಸಲಿದ್ದು ಕನಿಷ್ಠ ದರದಲ್ಲಿ ಪ್ರಯಾಣಿಸುವರಿಂದ ಹೆಚ್ಚುವರಿ ದರ ವಸೂಲಿ ಮಾಡುವುದಿಲ್ಲ ಎಂದು ತಲಪಾಡಿ – ಮಂಗಳೂರು ಬಸ್ ಮಾಲಕರ ಸಂಘದ ಅಧ್ಯಕ್ಷ ಕರೀಂ ಉಚ್ಚಿಲ ತಿಳಿಸಿದ್ದಾರೆ.