ಹುಬ್ಬಳ್ಳಿ: ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಪ್ರತಿಭಟನಾ ನಿರತರ ಬಂಧನ ಖಂಡಿಸಿ ಕೆಲ ಸಾರಿಗೆ ನೌಕರರು ಶುಕ್ರವಾರ ಕರ್ತವ್ಯ ಬಹಿಷ್ಕರಿಸಿದ್ದು, ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಬೆಂಗಳೂರಿನಲ್ಲಿ ಪ್ರತಿಭಟನಾ ನಿರತರ ಬಂಧನ ಹಾಗೂ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದ ಬೆನ್ನಲ್ಲೆ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದನ್ನು ಸರಿಪಡಿಸಲು ಬೆಳ್ಳಂಬೆಳಿಗ್ಗೆ ಹಿರಿಯ ಅಧಿಕಾರಿಗಳು ಫೀಲ್ಡಿಗಿಳಿದಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಮುಕ್ಕಾಂ ಹೂಡಿ ಇರುವ ಹಾಗೂ ಕರ್ತವ್ಯಕ್ಕೆ ಹಾಜರಾಗಿರುವ ಸಿಬ್ಬಂದಿಯನ್ನು ಬಳಿಸಿ ಅಗತ್ಯ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಒತ್ತು ನೀಡುತ್ತಿದ್ದಾರೆ.
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರಕ್ಕೆ ಸಾರ್ವಜನಿಕರ ಆಕ್ರೋಶ!
ಗುರುವಾರ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೂ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಾಸ ಆಗಿರಲಿಲ್ಲ. ಆದರೆ ಪ್ರತಿಭಟನಾ ನಿರತರ ಬಂಧನ ಖಂಡಿಸಿ ಏಕಾಏಕಿ ಮುಷ್ಕರ ನಿರ್ಧಾರ ಕೈಗೊಂಡ ಹಿನ್ನಲೆಯಲ್ಲಿ ಸಮಸ್ಯೆ ಉಂಟಾಗಿದೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಬಸ್ಸುಗಳ ಸಂಚಾರಕ್ಕೆ ಅಧಿಕಾರಿಗಳು ಬಸ್ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಸಂಸ್ಥೆ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.