ವರದಿ : ದತ್ತು ಕಮ್ಮಾರ
ಕೊಪ್ಪಳ: ಕೋವಿಡ್-19 ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಜಿಲ್ಲಾಡಳಿತವು ಸೋಂಕು ನಿಯಂತ್ರಣಕ್ಕೆ ವಿವಿಧ ಕಸರತ್ತು ನಡೆಸುತ್ತಿದೆ. ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ನಿಗಾ ವಹಿಸಿದೆಯಲ್ಲದೇ ಗ್ರಾಮ ಮಟ್ಟದ ಸಮಿತಿಗೆ ಮತ್ತೆ ಜವಾಬ್ದಾರಿ ನೀಡಿದೆ.
ನೈಟ್ ಕರ್ಫ್ಯೂನಲ್ಲಿ ಯಾವುದೇ ವಿನಾಯಿತಿ ನೀಡದೇ ಯಥಾವತ್ತಾಗಿ ಜಾರಿಗೆ ಆಡಳಿತ ವರ್ಗ ಮುಂದಾಗಿದೆ. ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿದೆ. ಹಲವು ಭಾಗದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಸೇರಿದಂತೆ ಕಂಟೈನಮೆಂಟ್ ಝೋನ್‌ಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಭಾಗದಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲಸ ಅರಸಿ ಹೋದವರು ಮತ್ತೆ ಲಾಕ್ ಡೌನ್ ಆಗುವ ಭಯದಲ್ಲಿ ನೈಟ್ ಕರ್ಫ್ಯೂ ಪರಿಸ್ಥಿತಿ ಅರಿತು ಮತ್ತೆ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇದನ್ನು ಅರಿತಿರುವ ಜಿಲ್ಲಾಡಳಿತವು ಹೆಚ್ಚಿನ ನಿಗಾ ವಹಿಸಿದ್ದು, ಎರಡನೇ ಅಲೆಯ ಅಬ್ಬರ ತಡೆಯಲು ನಾನಾ ಕಸರತ್ತು ನಡೆಸುತ್ತಿದೆ.
ಸರ್ಕಾರವು ಈಗಾಗಲೇ ನೈಟ್ ಕರ್ಫ್ಯೂ, ಶನಿವಾರ-ರವಿವಾರ ಸಂಪೂರ್ಣ ಕರ್ಫ್ಯೂಗೆ ಆದೇಶ ಮಾಡಿದ್ದು, ಈ ಬೆನ್ನಲ್ಲೆ ಜಿಲ್ಲಾಡಳಿತ ಜನ ಸಂಚಾರ ತಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಜನರ ಗುಂಪು ಸೇರುವುದನ್ನು ತಡೆಯುವ ಕೆಲಸಕ್ಕೂ ಮುಂದಾಗಿದೆ. ಸಭೆ, ಸಮಾರಂಭಕ್ಕೂ ಬ್ರೆಕ್ ಹಾಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಚಿಸುವ ಕೋವಿಡ್ ಮಾರ್ಗಸೂಚಿಯನ್ನೂ ತಾಲೂಕು ಹಂತದಲ್ಲಿ ಜಾರಿಗೆ ಮುಂದಾಗುತ್ತಿದೆ. ಆದರೆ ಕೆಲವೊಂದು ಆದೇಶಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದು ಜಿಲ್ಲಾಡಳಿತಕ್ಕೂ ತಲೆನೋವಾಗಿದೆ. ಜನರು ಸಹ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡದೇ ಇರುವುದು ಅಧಿ ಕಾರಿಗಳಿಗೂ ದೊಡ್ಡ ಸಮಸ್ಯೆಯಾಗಿದೆ.
ಅಧಿಕಾರಿಗಳು ಮಾತ್ರ, ಎಲ್ಲವೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಬದಲಾಗಿ ಜನರ ಸಹಕಾರವೂ ಅತಿ ಮುಖ್ಯವಾಗಿದೆ. ಜನರು ಸ್ವಯಂ ಇಚ್ಛೆಯಿಂದ ಮಾಸ್ಕ್ ಧರಿಸಿಯೇ ಮನೆಯಿಂದ ಹೊರಡಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎನ್ನುವ ಸಂದೇಶ ನೀಡುತ್ತಿದೆ.
ಇಷ್ಟಾದರೂ ಜನರು ಅದೆಲ್ಲವನ್ನು ಲೆಕ್ಕಿಸದೇ ಎಲ್ಲೆಂದರಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಇದರಿಂದ ಜಿಲ್ಲಾದ್ಯಂತ ಬುಧವಾರ ಪೊಲೀಸ್, ಸಂಚಾರ ಠಾಣೆ, ಎಸಿ, ಕಂದಾಯ ಇಲಾಖೆ ಅಧಿ ಕಾರಿಗಳು ಮಾಸ್ಕ್ ಧರಿಸದೇ ಇರುವವರನ್ನು ತಡೆದು ದಂಡ ವಿ ಧಿಸಲು ಮುಂದಾಗಿದ್ದಾರೆ.
ಗ್ರಾಮ ಮಟ್ಟದ ಸಮಿತಿಗೆ ಹೊಣೆ: ಮೊದಲ ಅಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ರಚಿಸಲಾಗಿದ್ದ ಗ್ರಾಮಮಟ್ಟದ ಸಮಿತಿಗೆ ಮತ್ತೆ ಜವಾಬ್ದಾರಿ ನೀಡಲಾಗಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಜನರ ಮೇಲೆ ಹೆಚ್ಚು ನಿಗಾ ವಹಿಸುವಂತೆಯೂ ಗ್ರಾಮ ಲೆಕ್ಕಾಧಿ ಕಾರಿ, ಆರೋಗ್ಯಾ ಧಿಕಾರಿ, ಆಶಾ, ಅಂಗನವಾಡಿ ಪ್ರತಿನಿಧಿ ಗಳಿಗೆ ಸೂಚನೆ ನೀಡಲಾಗಿದೆ. ಸೋಂಕಿನ ಲಕ್ಷಣ ಇರುವ ವ್ಯಕ್ತಿಗಳಿಗೆ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸ್ವಾಬ್ ನೀಡುವಂತೆಯೂ ಸೂಚಿಸುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಸ್ವಾéಬ್ ಸಂಗ್ರಹ: ಇನ್ನೂ ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಜನರ ಸ್ವಾéಬ್ ಸಂಗ್ರಹ ಮಾಡುತ್ತಿದ್ದು, ಇದರೊಟ್ಟಿಗೆ ಈಚೆಗೆ ನಡೆದ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಸೋಂಕಿನ ಲಕ್ಷಣ ಇರುವ ವ್ಯಕ್ತಿಗಳ ಸ್ವಾéಬ್ ಸಂಗ್ರಹ ಮಾಡಿ ಸರ್ಕಾರಿ ಆಸ್ಪತ್ರೆಗಳಿಗೆ ಸ್ಯಾಂಪಲ್ ಕಳುಹಿಸುವ ಹೊಣೆ ನೀಡಲಾಗಿದೆ. ಗಂಗಾವತಿಯ ಖಾಸಗಿ ಆಸ್ಪತ್ರೆಗೆ ಪ್ರಸ್ತುತ ಜವಾಬ್ದಾರಿ ನೀಡಲಾಗಿದೆ.