ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗಿಳಿಯದ ಪರಿಣಾಮ ಪ್ರಯಾಣಿಕರು ಕೂಡ ನಿಲ್ದಾಣದತ್ತ ಮುಖ ಮಾಡಲಿಲ್ಲ.
ಪರ್ಯಾಯವಾಗಿ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿದ್ದರೂ ಆ ಮಾಲಿಕರಿಗೆ ನಿರೀಕ್ಷಿತ ಆದಾಯ ತರಲಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿದ್ದರೂ ಪ್ರಯಾಣಿಕರ ಪರದಾಟ ತಪ್ಪಲಿಲ್ಲ.
6 ವೇತನ ಆಯೋಗ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಸಾರಿಗೆ ನೌಕರರ ತೀವ್ರ ಹೋರಾಟಕ್ಕೆ ಮುಂದಾಗಿದ್ದು, ಮೊದಲ ದಿನ ಬುಧವಾರ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗಿಳಿಯಲಿಲ್ಲ. ಸಾರಿಗೆ ನೌಕರರ ಹೋರಾಟಕ್ಕೆ ಸೆಡ್ಡು ಹೊಡೆದಿರುವ ಸರಕಾರ ಪೊಲೀಸ್, ಆರ್‌ಟಿಒ ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳ ಮೂಲಕ ಖಾಸಗಿ ವಾಹನಗಳ ಸಾರಿಗೆ ಸೇವೆ ನೀಡಲು ಮುಂದಾಗಿತ್ತು.
ಇದರಿಂದ ಒಂದಿಷ್ಟು ಮಾರ್ಗಗಳ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಯಿತು. ಖಾಸಗಿ ವಾಹನಗಳ ಓಡಾಟಕ್ಕೆ ಬೆಳಿಗ್ಗೆ 6:00 ಗಂಟೆಯಿಂದಲೇ ಸಿದ್ಧಪಡಿಸಲಾಗಿತ್ತು. ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ, ಡಿಸಿಪಿ ಕೆ.ರಾಮರಾಜನ್, ಆರ್ ಟಿಒ ಅಪ್ಪಯ್ಯ ನಾಲತ್ವಾಡಮಠ ಸೇರಿದಂತೆ ಹಿರಿಯ ಅಧಿಕಾರಿಗಳು ಹಳೇ ಬಸ್ ನಿಲ್ದಾಣದಲ್ಲಿ ಮುಕ್ಕಾಂ ಹೂಡಿದ್ದರು. ಬಿಕೋ ಎನ್ನುತ್ತಿದ್ದ ನಿಲ್ದಾಣ: ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹೊರ ಬಾರದ ಹಿನ್ನೆಲೆಯಲ್ಲಿ ನಗರದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಬಸ್‌ಗಳ ಸಿಬ್ಬಂದಿ ಹೊರತುಪಡಿಸಿ ಯಾರೂ ಸುಳಿಯಲಿಲ್ಲ. ಹಳೇ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡುವ ವ್ಯವಸ್ಥೆಯಿದ್ದರೂ ನಿರೀಕ್ಷಿತ ಜನರು ಇರಲಿಲ್ಲ.
ಹುಬ್ಬಳ್ಳಿ- ಧಾರವಾಡ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಹುತೇಕ ಮಾರ್ಗದಲ್ಲಿ ಪ್ರಯಾಣಿಕರ ಕೊರತೆಯಿರುವುದು ಕಂಡು ಬಂತು. ಹೀಗಾಗಿ ಬೇಂದ್ರೆ ಸಾರಿಗೆ ಸೇರಿದಂತೆ ಕೆಲ ಖಾಸಗಿ ವಾಹನಗಳು ಹು-ಧಾ ನಡುವೆ ಸಂಚಾರಕ್ಕೆ ಹೆಚ್ಚು ಒಲವು ತೋರಿರುವುದು ಕಂಡು ಬಂದಿತು. ಸಾರಿಗೆ ಬಸ್ ದರ ಮಾತ್ರ ಸಂಗ್ರಹಿಸುವಂತೆ ಸೂಚನೆ ನೀಡಲಾಗಿತ್ತು. ಇದರಿಂದ ತಮಗೆ ನಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ 20-30 ರೂ. ಹೆಚ್ಚುವರಿಯಾಗಿ ಸಂಗ್ರಹಿಸಿರುವುದು ಕಂಡು ಬಂತು.