Advertisement
ಸುಮಾರು 50 ವರ್ಷಗಳಷ್ಟು ಹಳೆಯದಾದ ಜನನಿಬಿಡ ಬಸ್ ನಿಲ್ದಾಣವಾದ ಕುಂಬಳೆ ನಿಲ್ದಾಣ ಕಳೆದ 5 ವರ್ಷಗಳಲ್ಲಿ ಶಿಥಿಲಾವಸ್ಥೆಯಲ್ಲಿದ್ದು, ಕೆಲವು ತಿಂಗಳುಗಳ ಹಿಂದೆ ಕೆಡವಿ ನೆಲಸಮ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಕುಸಿಯುವ ಭೀತಿ ಎದುರಿಸುತ್ತಿದ್ದ ನಿಲ್ದಾಣದ ಮೇಲ್ಚಾವಣಿಯ ಒಂದು ಭಾಗ ಹಾಗೂ ಛಾವಣಿಯ ಕೆಳಭಾಗ ಅಲ್ಲಲ್ಲಿ ಕುಸಿದು ಅಪಾಯದ ಆತಂಕಕ್ಕೆ ಕಾರಣವಾಗಿತ್ತು. ಕಟ್ಟಡದ ಮೇಲಂತಸ್ಥಿನಲ್ಲಿ ಮಳಿಗೆಗಳನ್ನು ಹೊಂದಿದ್ದ ವ್ಯಾಪಾರಿಗಳು ಈ ಕಾರಣದಿಂದ ಅಂಗಡಿಗಳನ್ನು ಹಿಂದೆಯೇ ತೆರವುಗೊಳಿಸದ್ದರು. ನಿಲ್ದಾಣ ಕಟ್ಟಡದ ಕೆಳ ಅಂತಸ್ಥಿನ ವ್ಯಾಪಾರಿಗಳಿಗೆ ಗ್ರಾಮ ಪಂಚಾಯತ್ ಅಂಗಡಿಮುಗ್ಗಟ್ಟುಗಳನ್ನು ತೆರವುಗೊಳಿಸುವಂತೆ ನೋಟೀಸುಗಳನ್ನು ನೀಡಿದ್ದರೂ ಬದಲಿ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಪ್ರತಿಭಟನೆ ಮುಂದಾಗಿದ್ದರು.ಆದರೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಬಳಿಕ ಕಾನೂನಿನ ಅಸ್ತ್ರ ಪ್ರಯೋಗಿಸಿ ಕೆಡವಲಾಗಿತ್ತು.ಈ ಮಧ್ಯೆ 2018ರ ಮೇ ತಿಂಗಳಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ಪ್ರಯಾಣಿಕರ ಮೇಲೆ ಕಟ್ಟಡದ ಕಾಂಕ್ರಿಟ್ ತುಂಡುಗಳು ಬಿದ್ದು ಗಾಯಗೊಂಡಿದ್ದರು.ಇದಕ್ಕಾಗಿ ಹೊಸ ಬಸ್ ನಿಲ್ದಾಣವನ್ನು ಶೀಘ್ರ ನಿರ್ಮಿಸುವಂತೆ ನಾಗರಿಕರು ಒತ್ತಾಯಿಸಿದ್ದರು. ಗ್ರಾಮ ಪಂಚಾಯತ್ ಯೋಜನೆಯಂತೆ ನೂತನ ಬಸ್ ನಿಲ್ದಾಣ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಹೆಚ್ಚಿನ ಮೊತ್ತದ ನಿಧಿಯ ಅಗತ್ಯವಿರುವುದರಿಂದ ಇದೀಗ ಕೇರಳ ಅರ್ಬನ್ ಏಂಡ್ ರೂರಲ್ ಡೆವೆಲಪ್‌ಮೆಂಟ್ ಫಿನಾನ್ಸ್ ಕೋರ್ಪರೇಶನ್ (ಕೆಯುಆರ್‌ಡಿಎಫ್‌ಸಿ)ನೆರವು ಒದಗಿಸುವ ಭರವಸೆ ನೀಡಿದೆ.ಈ ಕುರಿತು ಈಗಾಗಲೇ ಕೆಯುಆರ್‌ಡಿಎಫ್‌ಸಿ ಸಂಬಂಧಿಸಿದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಹಣಕಾಸು ಸಂಸ್ಥೆಯ ತಂಡ ಬಸ್ ನಿಲ್ದಾಣದ ಉದ್ದೇಶಿತ ಸ್ಥಳಗಳನ್ನು ಸಂದರ್ಶಿಸಿದೆ. ನೂತನ ನಿಲ್ದಾಣದ ಬಗ್ಗೆ ನೀಲನಕ್ಷೆ ತಯಾರಿಸಿ,ಅಂಡರ್ ಗ್ರೌಂಡ್ ರಸ್ತೆ,ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳನ್ನೊಳಗೊಂಡ ನೂತನ ನಿಲ್ದಾಣವನ್ನು ನಿರ್ಮಿಸಲು ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡದ ನಕ್ಷೆ ಸಿದ್ಧಗೊಂಡಿದೆ. ಕಟ್ಟಡದ ಶಿಲಾನ್ಯಾಸ ಜೂನ್ ತಿಂಗಳಲ್ಲಿ ನಡೆಯಲಿದೆ. ಕಟ್ಟಡದಲ್ಲಿ ವ್ಯಾಪಾರ ಮಳಿಗೆಗಳ ಸಹಿತ ಶೌಚಾಲಯವನ್ನೂ ಒಳಗೊಂಡಿದೆ.
ಕೆಡವಿದ ಬಸ್ ನಿಲ್ದಾಣದ ಸುತ್ತಮುತ್ತ ಅಡ್ಡಾದಿಡ್ಡಿಯಾಗಿ ಖಾಸಗೀ ವಾಹನಗಳ ನಿಲುಗಡೆಯಿಂದ ಪ್ರಯಾಣಿಕರಿಗೆ ನಿಲ್ದಾಣದೊಳಗೆ ಪ್ರವೇಶಿಸಲು ತೊಡಕಾಗಿದೆ.ಇದನ್ನು ಪೊಲೀಸರ ನೆರನಿನಿಂದ ತೆರವುಗೊಳಿಸುವುದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ವಾರ್ಡ್ ಸದಸ್ಯರು ಹಲವು ಬಾರಿ ಉದಯವಾಣಿಗೆ ಭರವಸೆನೀಡಿದರೂ ಇದು ಇನ್ನೂ ಪಾಲನೆಯಾಗಿಲ್ಲ.
Related Articles
Advertisement