ಜಮಖಂಡಿ: ಸಾವಳಗಿ ಹೋಬಳಿಯಲ್ಲಿ 24 ಗ್ರಾಮಗಳಿದ್ದು, ಬಸ್ ನಿಲ್ದಾಣ ಇಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಸರಕಾರಕ್ಕೆ ಎರಡು ಜಾಗ ನೀಡಲಾಗಿದ್ದು, ಸಾವಳಗಿಯಲ್ಲಿ ಅಂದಾಜು 3 ಕೋಟಿ ವೆಚ್ಚದಲ್ಲಿ ಹೊಸ ಬಸ್‌ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡುವ ಮೂಲಕ ಮಂಜೂರಾತಿ ನೀಡಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ತಾಲೂಕಿನ ಹಂಚಿನಾಳ-ಗಲಗಲಿ ಪುನರ್ವಸತಿ ಕೇಂದ್ರದಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿ ಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ನೂತನ ಸ್ವಯಂ ಚಾಲಿತ ಚಾಲನಾ ಪರೀûಾ ಪಥದ ಅಡಿಗಲ್ಲು ಸಮಾರಂಭದ ಭೂಮಿಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಜಮಖಂಡಿ ತಾಲೂಕು ಅತೀ ವೇಗದಲ್ಲಿ ಬೆಳೆಯುತ್ತಿದೆ. ಸಾರಿಗೆ ಸಚಿವರು ಕೇಂದ್ರ ಬಸ್ ನಿಲ್ದಾಣಕ್ಕೆ ನಾಲ್ಕು ನಗರ ಸಂಚಾರ ಬಸ್ ಮಂಜೂರಾತಿ ನೀಡಬೇಕು.
ಹಿಂದಿನ ಶಾಸಕ ದಿ| ಸಿದ್ದು ನ್ಯಾಮಗೌಡ ಅವರ ಅವಧಿ ಯಲ್ಲಿ ಮಂಜೂರಾಗಿದೆ. ರಾಜ್ಯದಲ್ಲಿ ಅತೀ ಸುಂದರವಾಗಿ ನಿರ್ಮಾಣಗೊಂಡಿರುವ ಜಮಖಂಡಿ ಬಸ್ ನಿಲ್ದಾಣಕ್ಕೆ 2ನೇ ಹಂತದ ಕಾಮಗಾರಿಗೆ 4 ಕೋಟಿ ಮಂಜೂರಿ ಮಾಡಬೇಕು. ರಾಜ್ಯ ಸರಕಾರ 18 ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಚಾಲನಾ ತರಬೇತಿ ನೀಡುವ ಮೂಲಕ ಚಾಲನಾ ಪತ್ರ ವಿತರಿಸುವ ಹೊಸ ಯೋಜನೆ ಜಾರಿಗೆ ತಂದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯ ಕಡಿಮೆಯಾಗಲಿದೆ ಎಂದರು. ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ವಾಹನ ಖರೀದಿಸಿದವರಿಗೆ ಕಡ್ಡಾಯವಾಗಿ ವಾಹನ ಪರವಾನಗಿ ಪಡೆದುಕೊಳ್ಳುವ ವ್ಯವಸ್ಥೆ ಆಗಬೇಕು.
ಹೆಚ್ಚು ಲೋಡ್ ತೆಗೆದುಕೊಂಡು ಸಂಚರಿಸುವವರಿಗೆ ಹೊಸ ಕಾನೂನು ಜಾರಿಗೆ ತರಬೇಕು.ನಮ್ಮ ಭಾಗದಿಂದ ಬೆಂಗಳೂರಿಗೆ ಹೋಗಲು ಎರಡು ಹೊಸ ಮಾದರಿಯ ಬಸ್ ಪ್ರಾರಂಭಿಸಬೇಕು. ಕೊರೊನಾ ನಂತರ ಗ್ರಾಮೀಣ ಭಾಗದಲ್ಲಿ ಮೊದಲಿನಂತೆ ಬಸ್‌ಗಳು ಸಂಚರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ರಬಕವಿ ಮತ್ತು ಬನಹಟ್ಟಿಯ ಬಸ್ ನಿಲ್ದಾಣಗಳು ಶಿಥಿಲಾವಸ್ಥೆ ತಲುಪಿದ್ದು, ಹೊಸ ಬಸ್ ನಿಲ್ದಾಣಕ್ಕೆ ಮೂಂಜೂರಾತಿ ನೀಡಬೇಕು ಎಂದರು.
ಸಚಿವ ಬಿ. ಶ್ರೀರಾಮಲು ಶಿಲಾನ್ಯಾಸ ಭೂಮಿಪೂಜೆ ನೆರವೇರಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ಶ್ರೀಕಾಂತ ಕುಲಕರ್ಣಿ, ಜಿ.ಎಸ್.ನ್ಯಾಮಗೌಡ, ಯಮನೂರ ಮೂಲಂಗಿ, ಸಿದ್ದು ಮೀಸಿ, ರಾಜು ಕಲಕಂಬ, ಜಗದೀಶ ಗುಡಗುಂಟಿ, ಅಪರ್ ಸಾರಿಗೆ ಆಯುಕ್ತ ಎಂ.ಸಾಂಬ್ರಾಣಿ, ಅಭಿಯಂತರ ಎಚ್. ಎಂ.ನಾಗರಾಜಮೂರ್ತಿ, ಎಸಿ ಡಾ| ಸಿದ್ದು ಹುಲ್ಲೊಳ್ಳಿ ಇದ್ದರು.