Advertisement

ರಾಜ್ಯ ಹೆದ್ದಾರಿಯಲ್ಲಿ ನಿಲ್ಲುತ್ತಿದ್ದ ಬಸ್‌ಗಳು ನಿಲ್ದಾಣಕ್ಕೆ

05:40 AM Jul 30, 2017 | Karthik A |

– ಹಾಲಾಡಿ ಗ್ರಾ.ಪಂ.ನ ದಿಟ್ಟ  ನಿರ್ಧಾರ

Advertisement

ಸಿದ್ದಾಪುರ: ಹಾಲಾಡಿಯಲ್ಲಿ ಬಸ್‌ ನಿಲ್ದಾಣ ಇದ್ದರೂ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಹೋಗದೆ, ಹಾಲಾಡಿ ಪೇಟೆಯ ಮುಖ್ಯ ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಆಡಚಣೆ ಆಗುತ್ತಿತ್ತು. ಅಲ್ಲದೆ ಆಗಾಗ ಅಪಘಾತಗಳು ಕೂಡ ನಡೆಯುತ್ತಿದ್ದವು. ಈ ಬಗ್ಗೆ ನಿರಂತರ ದೂರುಗಳು ಗ್ರಾ. ಪಂ.ಗೆ ಬರುತ್ತಿದ್ದವು. ದೂರಿನ ಹಿನ್ನೆಲೆಯಲ್ಲಿ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುವ ಹಾಗೆ ಮಾಡಿದ ಹಾಲಾಡಿ ಗ್ರಾ. ಪಂ.ನ ದಿಟ್ಟ ನಿರ್ಧಾರ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಹಾಲಾಡಿಯು ಪ್ರಮುಖ ಎರಡು ರಾಜ್ಯ ಹೆದ್ದಾರಿ ಸಂಧಿಸುವ ಪೇಟೆಯಾಗಿದೆ. ಹಾಲಾಡಿ ಪೇಟೆಯ ಸರ್ಕಲ್‌ನಲ್ಲಿಯೇ ಪ್ರಯಾಣಿಕರಿಗಾಗಿ ಬಸ್‌ಗಳು ನಿಲ್ಲುವು ದರಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸವಾರರಿಗೂ ತೊಂದರೆ ಆಗುತ್ತಿದ್ದವು. ಇದರಿಂದ ಬೇಸತ್ತ ನಿತ್ಯ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಗ್ರಾ. ಪಂ.ಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಗ್ರಾ. ಪಂ. ಬಸ್‌ಗಳು ಕಡ್ಡಾಯವಾಗಿ ನಿಲ್ದಾಣಕ್ಕೆ ಬರುವಂತೆ ಕಾನೂನು ಕ್ರಮತೆಗೆದು ಕೊಂಡಿದೆ.


ಮೊದಲು ಹೆದ್ದಾರಿ ಬದಿಯಲ್ಲಿ ನಿಲ್ಲುತ್ತಿರುವ ಬಸ್‌ಗಳು.

ಅತಿಕ್ರಮಣ ತೆರವುಗೊಳಿಸಿ: ಹಾಲಾಡಿಯಲ್ಲಿ ಖಾಸಗಿ ಕಟ್ಟಡ ಮಾಲಕರು ಹಾಗೂ ಅಂಗಡಿ ಮುಂಗಟ್ಟುದಾರರು ರಸ್ತೆಯ ಭಾಗವನ್ನು ಅತಿಕ್ರಮಿಸುವುದರಿಂದ ವಾಹನ ಸವಾರರಿಗೆ ಮತ್ತು ಯಾತ್ರಾರ್ಥಿ ಗಳಿಗೆ ಮತ್ತು ಪ್ರವಾಸಿಗರಿಗೆ ತೊಂದರೆ ಯಾಗುತ್ತದೆ. ಅತಿಕ್ರಮಣ ತೆರವುಗೊಳಿ ಸುವುದರಿಂದ ಪೇಟೆಯ ಅಂದವು ಹೆಚ್ಚುತ್ತದೆ. ಪೇಟೆಯ ಅಂದ ಹೆಚ್ಚಿದ ಹಾಗೇ ಪ್ರವಾಸಿಗರು ಕೂಡ ಪೇಟೆಯಲ್ಲಿ ನಿಂತು ವ್ಯವಹಾರ ಕೂಡ ಮಾಡುತ್ತಾರೆ. ಇದರಿಂದ ವ್ಯಾಪಾರವು ವೃದ್ಧಿಸುತ್ತದೆ ಎನ್ನುವುದು ಹಾಲಾಡಿ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

Advertisement

ಜನರಿಗೆ ವ್ಯವಸ್ಥಿತ ವ್ಯವಸ್ಥೆ: ಬಸ್‌ಗಳು ಈಗ ನಿಲ್ದಾಣಕ್ಕೆ ಹೋಗುವುದರಿಂದ ಟ್ರಾಫಿಕ್‌ ಸಮಸ್ಯೆ, ಅಪಘಾತಗಳು ಕಡಿಮೆಯಾಗಿವೆ. ಜನ ಜಾಗೃತಿ ಹಾಗೂ ವ್ಯವಸ್ಥಿತ ವ್ಯವಸ್ಥೆಯಾಗುವವರೆಗೆ ದಿನ ನಿತ್ಯ ಇಬ್ಬರು ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಶಂಕರನಾರಾಯಣ ಪೊಲೀಸ್‌ ಠಾಣೆಯ ಉಪ ನಿರೀಕ್ಷಕ ಸುನಿಲ್‌ಕುಮಾರ್‌ ಅವರು ಹೇಳಿದರು.

ನೋ ಪಾರ್ಕಿಂಗ್‌ ಬೋರ್ಡ್‌ ಸಮಸ್ಯೆ: ಮೊದಲಿನಿಂದಲೂ ಬಸ್‌ಗಳು ಹೆದ್ದಾರಿ ಬದಿಯಲ್ಲಿ ನಿಲ್ಲುತ್ತಿರುವಾಗಲು, ಇತರ ವಾಹನಗಳ ಸವಾರರು ರಸ್ತೆಯ ಬದಿಯಲ್ಲಿ  ವಾಹನ ಪಾರ್ಕಿಂಗ್‌ ಮಾಡುತ್ತಿದ್ದರು. ಈಗ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಹೋಗುತ್ತಿವೆ. ಹಾಗಿರುವಾಗ ಪೇಟೆಯಲ್ಲಿ ನೋ ಪಾರ್ಕಿಂಗ್‌ ಬೋರ್ಡು ಯಾಕೆ?. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಕೂಡಲೆ ನೋ ಪಾರ್ಕಿಂಗ್‌ ಬೋರ್ಡ್‌ ಸಮಸ್ಯೆ ಸರಿಪಡಿಸಿ, ಅನುಕೂಲ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ಹಾಲಾಡಿ ಪೇಟೆಯು ಎರಡು ಪ್ರಮುಖ ರಾಜ್ಯ ಹೆದ್ದಾರಿಗಳು ಸಂಧಿಸುವ ಸ್ಥಳವಾಗಿರುವುದರಿಂದ ಬಸ್‌ಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಗಳಾಗುತ್ತಿವೆ. ಇದರ ಬಗ್ಗೆ ಗ್ರಾ. ಪಂ.ಗೆ ನಿರಂತರ ದೂರುಗಳು ಬರುತ್ತಿವೆ. ಸಾರ್ವಜನಿಕರ ದೂರಿನ ಮೇರೆಗೆ ಬಸ್‌ಗಳನ್ನು ನಿಲ್ದಾಣಕ್ಕೆ ಬರುವ ಹಾಗೆ ಕ್ರಮ ತೆಗೆದುಕೊಂಡಿದ್ದೇವೆ. ರಸ್ತೆ ಬದಿಯಲ್ಲಿರುವ ಖಾಸಗಿ ಕಟ್ಟಡದವರು, ಅಂಗಡಿ, ಹೊಟೇಲ್‌ ಮಾಲಕರು ರಸ್ತೆ ಭಾಗವನ್ನು ಅತಿಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಬೇಕು. ಇದರಿಂದ ಪೇಟೆಯ ಅಂದ ಹೆಚ್ಚುತ್ತದೆ. ಅಂದ ಹೆಚ್ಚಿದ ಹಾಗೆ ವ್ಯಾಪಾರವು ವೃದ್ಧಿಸುತ್ತದೆ.
– ಹಾಲಾಡಿ ಸರ್ವೋತ್ತಮ ಹೆಗ್ಡೆ, ಹಾಲಾಡಿ ಗ್ರಾ. ಪಂ. ಅಧ್ಯಕ್ಷ

ಹಾಲಾಡಿಯ ಗ್ರಾ. ಪಂ.ನ ಒಳ್ಳೆಯ ನಿರ್ಧಾರದಿಂದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಿದೆ. ಮೊದಲು ಬಸ್‌ಗಾಗಿ ರಸ್ತೆ ಬದಿಯಲ್ಲಿ ಮಳೆ ಬಿಸಿಲಿನಲ್ಲಿ ಕಾಯಬೇಕಾಗಿತ್ತು. ಮಳೆಗಾಲದಲ್ಲಿ ಮೈಒದ್ದೆ, ಬೇಸಗೆಯಲ್ಲಿ ಧೂಳಿನ ತೊಂದರೆಯಿಂದ ಕಿರಿಕಿರಿಯಾಗುತ್ತಿತ್ತು. ಈಗ ಬಸ್‌ಗಳು ನಿಲ್ದಾಣಕ್ಕೆ ಬರುವುದರಿಂದ ಹಾಗೂ ನಿಲ್ದಾಣದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಇರುವುದರಿಂದ ಈಗ ಯಾವ ತೊಂದರೆಗಳು ಇಲ್ಲ.
– ಅಕ್ಷಯಾ, ಕಾಲೇಜು ವಿದ್ಯಾರ್ಥಿನಿ

– ಸತೀಶ್‌ ಆಚಾರ್‌ ಉಳ್ಳೂರ್‌

Advertisement

Udayavani is now on Telegram. Click here to join our channel and stay updated with the latest news.

Next