ಚನ್ನಮ್ಮನ ಕಿತ್ತೂರು: ಅರಳಿಕಟ್ಟಿ ಸರ್ಕಲ್‌ನಲ್ಲಿ ನಿಲ್ಲಲು ಸಮರ್ಪಕ ಬಸ್ ತಂಗುದಾಣ ಇಲ್ಲದೇ ಸಾರ್ವಜನಿಕರು ಮಳೆಗಾಲ-ಬೇಸಿಗೆಯಲ್ಲಿ ಪರದಾಡುವಂತಾಗಿದೆ.
ಕಿತ್ತೂರು ಸುತ್ತಮುತ್ತಲಿನ ಗ್ರಾಮಗಳಾದ ನಂದಿಹಳ್ಳಿ, ಕಲಭಾವಿ, ಶಿವನೂರು, ಮರಿಗೇರಿ, ಜಮಳೂರು, ಹೂಲಿಕಟ್ಟಿ, ಉಗರಕೋಡ, ತೇಗೂರು, ಖೋದಾನಪೂರ ಸಂಗೊಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಂದ ಕೆಲಸಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬಸ್ ಮುಖಾಂತರ ಆಗಮಿಸುತ್ತಾರೆ. ಅವರು ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ಹೋಗುವಾಗ ಅರಳಿಕಟ್ಟಿ ಸರ್ಕಲ್‌ನಲ್ಲಿ ಇರುವ ಬಸ್ ತಂಗುದಾಣ ಚಿಕ್ಕದಿರುವುದರಿಂದ ಬಹುತೇಕರಿಗೆ ನೆರಳಲ್ಲಿ ನಿಲ್ಲಲು-ಕುಳಿತುಕೊಳ್ಳಲು ಸಿಗುತ್ತಿಲ್ಲ.
ಈಗ ಮಳೆಯಿಂದ ರಸ್ತೆಗಳು ಹದಗೆಟ್ಟಿದ್ದು, ಬಹುತೇಕ ಬಸ್‌ಗಳು ತಡವಾಗಿ ಸಂಚರಿಸುತ್ತಿರುವುದರಿಂದ, ಬಸ್ ಬರುವವರೆಗೆ ಸುರಿಯುವ ಮಳೆಯಲ್ಲಿ ನೆನೆದು ಮತ್ತು ಬೇಸಿಗೆಯಲ್ಲಿ ನೆತ್ತಿ ಸುಡುವ ಬಿಸಿಲಿನಲ್ಲಿ ಕಾಯುವ ದುಸ್ಥಿತಿ ಇದೆ. ಇದರಿಂದ ಮುಖ್ಯವಾಗಿ ವಿದ್ಯಾರ್ಥಿನಿಯರು, ಮಹಿಳೆಯರು, ವೃದ್ಧರು ಪರದಾಡುವಂತಾಗಿದೆ.
ಅಧಿಕಾರಿಗಳು ಎಚ್ಚೆತ್ತು ಬಸ್ ತಂಗುದಾಣ ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ರಾಜಕಾಣಿಗಳು ಏರ್‌ಕಂಡಿಷನ್ ಕಾರನ್ಯಾಗ ಓಡಾಡೂದ್ರಿಂದ ನಮ್ಮ ಕಷ್ಟ ಅವರಿಗೆಲ್ಲಿ ಗೊತ್ತಾಗಬೇಕ್ರಿ ದಿನಾಲೂ ನಾವು ಸರಿಯಾಗಿ ಬಿಸಿಲು ಚಾಲೂ ಆಗುವ ಹೊತ್ತಿಗೆ ಕಾಲೇಜಿನಿಂದ ನಡಕೊಂತ ಬಂದ ರಣರಣ ಬಿಸಿಲು ಮತ್ತು ಮಳೆಯಲ್ಲಿ ಗಿಡದ ನೆಳ್ಳಿಗೆ ಕುಂತ ತಾಸಗಟ್ಟಲೆ ಕಾಯ್ತಿàವಿ. ಇಲ್ಲಿ ಎಲ್ಲರಿಗೂ ಕುಳಿತುಕೊಳ್ಳಲು ಒಂದ ಬಸ್‌ಸ್ಟ್ಯಾಂಡ್ ಮಾಡಿದ್ರ ಬಾಳ ಚೊಲೊ ಅಕ್ಕೇತ್ರಿ. –
ಹೆಸರು ಹೇಳಲು ಇಚ್ಛಿಸದ ಗ್ರಾಮೀಣ ವಿದ್ಯಾರ್ಥಿ.
ಈ ವಿಷಯ ತಮ್ಮ ಮೂಲಕ ಗಮನಕ್ಕೆ ಬಂದಿದ್ದು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿನ ಬಸ್ ತಂಗುದಾಣ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು.
ಮಹಾಂತೇಶ ದೊಡ್ಡಗೌಡರ, ಶಾಸಕರು