ಹಾವೇರಿ: ಸಾರಿಗೆ ನೌಕರರ ಮುಷ್ಕರ 12ನೇ ದಿನ ಪೂರೈಸಿದ್ದು, ಇದರ ನಡುವೆಯೇ ರವಿವಾರ ಜಿಲ್ಲೆಯಲ್ಲಿ 140ಬಸ್‌ಗಳು ಸಂಚಾರ ಆರಂಭಿಸಿರುವುದರಿಂದ ಪ್ರಯಾಣಿಕರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
6ನೇ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಒತ್ತಾಯಿಸಿ ಕಳೆದ 12 ದಿನಗಳಿಂದ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಮುಷ್ಕರ ಶಕ್ತಿ ಕಳೆದುಕೊಳ್ಳುತ್ತಿದೆ. ಶಿಸ್ತು ಕ್ರಮಕ್ಕೆ ಹೆದರಿ ಚಾಲಕರು, ನಿರ್ವಾಹಕರು ಸೇರಿದಂತೆ 250ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದರಿಂದ ರವಿವಾರ ಜಿಲ್ಲೆಯ 6 ಡಿಪೋಗಳಿಂದ 140 ಬಸ್‌ಗಳು ಸಂಚರಿಸಿದವು. ಪ್ರಮುಖ ಸ್ಥಳಗಳ ನಡುವೆ ಬಸ್‌ಗಳು ಓಡಾಟ ಆರಂಭಿಸಿದ್ದರಿಂದ ಪ್ರಯಾಣಿಕರು ಸಾರಿಗೆ ಬಸ್‌ನಲ್ಲೇ ಪ್ರಯಾಣಿಸಲು ಅನುಕೂಲವಾಯಿತು.
ರವಿವಾರ ಹಿರೇಕೆರೂರಿನಿಂದ 30 ಬಸ್‌ಗಳು ಸಂಚರಿಸಿದವು. ರಾಣೆಬೆನ್ನೂರಿನಿಂದ ಅತಿ ಹೆಚ್ಚು 38 ಬಸ್‌ಗಳು ಓಡಾಡಿದವು. ಹಾವೇರಿ 37, ಬ್ಯಾಡಗಿ 18, ಹಾನಗಲ್ಲ 11 ಹಾಗೂ ಸವಣೂರಿನಿಂದ 7 ಬಸ್ ಗಳು ಸಂಚರಿಸಿದವು. ಇದಲ್ಲದೇ ಬೇರೆ ಜಿಲ್ಲೆಗಳಿಂದಲೂ ಬಸ್‌ಗಳು ಆಗಮಿಸಿದವು. ಹುಬ್ಬಳ್ಳಿ, ಶಿರಸಿ, ದಾವಣಗೆರೆಯಿಂದಲೂ ಜಿಲ್ಲೆಯ ವಿವಿಧ ಕಡೆ ಬಸ್‌ಗಳು ನಗರಕ್ಕೆ ಬಂದಿದ್ದವು. ಹೆಚ್ಚಿನ ಸಂಖ್ಯೆಯ ನೌಕರರು ಕೆಲಸಕ್ಕೆ ಹಾಜರಾಗಿದ್ದರಿಂದ ಬೆಳಗ್ಗೆಯಿಂದಲೇ ಡಿಪೋದಿಂದ ಒಂದೊಂದಾಗಿ ಬಸ್ ಗಳು ನಿಲ್ದಾಣಕ್ಕೆ ಬಂದವು.
ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ಬಿಡಲಾಯಿತು. ಬಸ್ ನಿಲ್ದಾಣದಲ್ಲಿ ನಿಂತಿದ್ದ ಟೆಂಪೋ, ಖಾಸಗಿ ಬಸ್‌ಗಳು ಖಾಲಿ ಖಾಲಿಯಾಗಿದ್ದವು. ಬಸ್‌ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಟೆಂಪೋಗಳು ನಿಲ್ದಾಣದಿಂದ ಜಾಗ ಖಾಲಿ ಮಾಡಿದವು. ಕೆಲವು ಟೆಂಪೋಗಳು ಪ್ರಯಾಣಿಕರಿಲ್ಲದೇ ಮಧ್ಯಾಹ್ನದವರೆಗೂ ಖಾಲಿ ಇರುವಂತಾಯಿತು.
ಬಸ್ ಸಂಚಾರದಲ್ಲಿ ವ್ಯತ್ಯಯ ಆಗುತ್ತಿರುವುದರಿಂದ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿತ್ತು. ಆದ್ದರಿಂದ ಗಂಟೆಗಟ್ಟಲೇ ನಿಲ್ಲಿಸಿ ಪ್ರಯಾಣಿಕರು ಭರ್ತಿಯಾದ ಮೇಲೆ ಬಸ್ ಓಡಿಸಲಾಯಿತು. ಆದರೂ, ಸಾರಿಗೆ ಸಂಸ್ಥೆ ಬಸ್‌ಗಳು ಓಡಾಟ ಹೆಚ್ಚಿದ್ದರಿಂದ ಪ್ರಯಾಣಿಕರು 12 ದಿನಗಳ ಬಳಿಕ ನೆಮ್ಮದಿಯಿಂದ ಪ್ರಯಾಣಿಸುವಂತಾಯಿತು.