ಕಾರ್ಕಳ: ಮಾಳ ಘಾಟಿಯಲ್ಲಿ ಟಿಪ್ಪರ್ ಮತ್ತು ಮಿನಿ ಬಸ್ ನಡುವೆ ಅಪಘಾತ ಸಂಭವಿಸಿದ ವೇಳೆ ಮಿನಿ ಬಸ್‌ನಲ್ಲಿದ್ದ ಪ್ರಯಾಣಿಕರು ಟಿಪ್ಪರ್ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮೂಡಿಗೆರೆಯ ಶಿವು ಜಿ.ಎಸ್ ಹಲ್ಲೆಗೊಳಗಾದವರು.
ಘಾಟಿ ಇಳಿದು ಮಾಳ ಕಡೆಗೆ ಬರುತ್ತಿದ್ದ ಟಿಪ್ಪರ್ ಮಾಳ ಘಾಟಿ ಚೆಕ್‌ಪೋಸ್ಟ್ ಸಮೀಪ ಶೃಂಗೇರಿಯತ್ತ ಹೋಗುತ್ತಿದ್ದ ಮಿನಿಬಸ್‌ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಬಸ್ಸಿನಲ್ಲಿದ್ದವರಿಗೂ ಟಿಪ್ಪರ್ ಚಾಲಕನ ನಡುವೆ ವಾಗ್ವಾದ ನಡೆದಿದೆ.
ಬಸ್‌ನಲ್ಲಿದ್ದ ಏಳೆಂಟು ಮಂದಿ ಪ್ರಯಾಣಿಕರು ಟಿಪ್ಪರ್ ಚಾಲಕ ಶಿವು ಅವರನ್ನು ವಾಹನದಿಂದ ಎಳೆದು ಹಾಕಿ ಹಲ್ಲೆ ಮಾಡಿದ್ದಾರೆ. ಗಾಯಾಳು ಚಾಲಕನನ್ನು ಸ್ಥಳಿಯರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿನಿ ಬಸ್ ಚಾಲಕ ಆರ್. ತಿಲಕ್ ಅವರು ಅಪಘಾತದಲ್ಲಿ ತನಗೆ ಗಾಯವಾಗಿರುವ ಕುರಿತು ಟಿಪ್ಪರ್ ಚಾಲಕ ಶಿವು ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಕರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.