ರಾಮನಗರ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಶನಿವಾರ ಬೆಳಗ್ಗೆ ತಾಲೂಕಿನ ಜಯಪುರ ಗ್ರಾಮದ ಬಳಿ ನಡೆದಿದೆ.
ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ: ಗಾಯಗೊಂಡ ನೌಕರರನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಬ್ಯಾಡರಹಳ್ಳಿಯ ಸವಿತಾ, ಶಾರದಮ್ಮ, ಉಜಿನಿಯ ಸೀತಮ್ಮ, ಸುಮಿತ್ರಾ, ಚಿಕ್ಕಬ್ಯಾಡರಹಳ್ಳಿಯ ಸುಮಿತ್ರಮ್ಮ, ಜಯಮ್ಮ, ಜ್ಯೋತಿ, ಲಕ್ಷ್ಮೀ, ಜೈಶೀಲಾ, ಲೀಲಾವತಿ, ಲಕ್ಷ್ಮೀದೇವಿ, ರಾಮನಗರ ತಾಲೂಕಿನ ಕ್ಯಾಸಾಪುರ ಗ್ರಾಮದ ಲಕ್ಷ್ಮೀ, ಸುನಿತಾ, ಮಂಗಳಗೌರಿ, ಚೌಡೇಶ್ವರಿ ಹಳ್ಳಿಯ ರೂಪಾ, ಶೈಲಜಾ, ಪ್ರಭಾವತಿ, ಸುಮಾ, ಹಿಪ್ಪೆ ಮರದದೊಡ್ಡಿ ಗ್ರಾಮದ ಅನಿತಾ, ಚಾಮನಹಳ್ಳಿಯ ರತ್ನ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಿ.ಎಂ.ಶ್ವೇತಾ, ಜ್ಯೋತಿ ಸೇರಿದಂತೆ ಐದಾರು ಮಹಿಳೆಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತಕ್ಕೆ ವೇಗದ ಚಾಲನೆಯೇ ಕಾರಣ: ರಾಮನಗರದ ಬಸವನಪುರದಲ್ಲಿನ ಮಧುರಾ ಗಾರ್ಮೆಂಟ್ಸ್‌ನ ಮಹಿಳಾ ನೌಕರರು ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಲ್ಲಿನ ಖಾಸಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎಂ.ಶ್ವೇತಾ ಹೊಸೂರು ಗ್ರಾಮದಿಂದ ಶಾಲೆಗೆ ತಮ್ಮ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಜಯಪುರ ಗೇಟ್ ಬಳಿ ಹೋಗುತ್ತಿದ್ದಾಗ ಅದೇ ವೇಳೆ ಹಿಂಬದಿಯಿಂದ ಬಂದ ಬಸ್ಸು ಡಿಕ್ಕಿ ಹೊಡೆದಿದೆ.
ಚಾಲಕನ ನಿಯಂತ್ರ ಕಳೆದುಕೊಂಡ ಬಸ್ಸು ಸ್ಕೂಟರ್ ಸಮೇತ ರಸ್ತೆ ಬದಿಗೆ ಉರುಳಿದೆ. ಬಸ್ಸಿನಲ್ಲಿದ್ದ 20 ಮಂದಿ ಮಹಿಳೆಯರ ಪೈಕಿ, ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಕೂಟರ್ ಚಾಲಕಿಗೂ ಪೆಟ್ಟಾಗಿದೆ. ಬಸ್ ಉರುಳಿದ್ದನ್ನು ಗಮನಿಸಿದ ಸ್ಥಳೀಯರು ಹರಸಾಹಸ ಪಟ್ಟು, ಪ್ರಯಾಣಿಕರನ್ನು ರಕ್ಷಿಸಿ ಆಟೋ ಇತರೆ ಖಾಸಗಿ ವಾಹನಗಳಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಚಾಲಕನ ವೇಗದ ಚಾಲನೆಯೇ ಕಾರಣ ಎಂದು ದೂರುಗಳು ಕೇಳಿ ಬಂದಿವೆ.
Advertisement
ಘಟನೆಯಲ್ಲಿ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದ ಹೊಸೂರು ಗ್ರಾಮದ ಬಿ.ಎಂ.ಶ್ವೇತಾ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗ್ರಾಮೆಂರ್ಟ್ಸ್ ವೊಂದರ ಮಹಿಳಾ ನೌಕರರು ಗಾಯಗೊಂಡ್ದಿದಾರೆ.
Related Articles
Advertisement
ನಾಗರಿಕರ ಅಸಮಾಧಾನ: ಎರಡನೇ ಶನಿವಾರ ಎಂಬ ಕಾರಣಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಬ್ಬರು ವೈದ್ಯರು ಮತ್ತು ಇಬ್ಬರು ಸಹಾಯಕರಿಯರು ಮಾತ್ರ ಇದ್ದರು. ಹೀಗಾಗಿ ಗಾಯಾಳುಗಳ ಪೈಕಿ ಕೆಲವರು ಪ್ರಥಮ ಚಿಕಿತ್ಸೆಯ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಟೋಗಳಲ್ಲೇ ಪ್ರಯಾಣಿಸಿ ದಾಖಲಾದರು ಎಂದು ಸಾರ್ವಜನಿಕರು ಆರೊಪಿಸಿದ್ದಾರೆ.
ಮಾಲೀಕರೇ ಚಿಕಿತ್ಸಾ ವೆಚ್ಚ ನೀಡಲಿ: ಗಾರ್ಮೆಂಟ್ಸ್ ಮಾಲೀಕರು ನಿಗದಿಪಡಿಸಿದ್ದ ಬಸ್ಸಿನಲ್ಲೇ ಮಹಿಳಾ ನೌಕರರು ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ಗಾಮೆಂರ್ಟ್ಸ್ ಮಾಲೀಕರೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಮಾಹಿತಿ ಪಡೆದು ಗಾರ್ಮೆಂಟ್ಸ್‌ನ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಗಾಯಾಳುಗಳ ಮಾಹಿತಿ ಸಂಗ್ರಹಿಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.