Advertisement
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರತುಪಡಿಸಿ ದ.ಕ.ದಲ್ಲಿ 223 ಹಾಗೂ ಉಡುಪಿಯಲ್ಲಿ 155 ಗ್ರಾ.ಪಂ.ಗಳಿದ್ದು, ಗ್ರಾಮ/ಹಳ್ಳಿಗಳ ಸಂಖ್ಯೆ ದುಪ್ಪಟ್ಟಿದೆ. ಉಡುಪಿ ನಗರ ವ್ಯಾಪ್ತಿಯಲ್ಲಿ ಖಾಸಗಿ ವ್ಯವಸ್ಥೆಯ ಸಿಟಿ ಬಸ್ ಹಾಗೂ ನರ್ಮ್ ಬಸ್‌ಗಳು ಸಂಚರಿಸುವಂತೆ ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಸಿಟಿ ಬಸ್, ನರ್ಮ್ ಬಸ್ ಸೌಲಭ್ಯವಿದೆ. ಇವೆಲ್ಲವೂ ನಗರ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳ ಮುಖ್ಯರಸ್ತೆಯನ್ನು ಸಂಪರ್ಕಿಸುತ್ತವೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಕೊಂಡಿಯಾಗಿವೆ. ನಗರಕ್ಕೆ ಹೊಂದಿಕೊಂಡ ಗ್ರಾಮ ಗಳಿಗೂ ಇವುಗಳ ಸೇವೆ ಲಭ್ಯವಿದೆ. ಆದರೆ ನಗರ, ಪಟ್ಟಣ ಕೇಂದ್ರಿತವಾಗಿಯೇ ಹೆಚ್ಚಿವೆ.
ಸರಕಾರಿ ಬಸ್ ಸೇವೆಗೆ ನರ್ಮ್ ಬಸ್‌ಗಳ ಕೊರತೆಯಿದೆ. ರಾಜ್ಯ ಕಚೇರಿಗೆ ಹೊಸ ಬಸ್‌ಗಾಗಿ ಪ್ರಸ್ತಾವನೆ ಹೋಗಿದೆ, ಬಸ್ ಬಂದಿಲ್ಲ. ಖಾಸಗಿಯವರು ಸೇವೆ ಒದಗಿಸಲು ಪ್ರತೀ ಟ್ರಿಪ್‌ನಲ್ಲಿ ಸಿಗುವ ಲಾಭಾಂಶವೇ ಆಧಾರ. ಹೀಗಾಗಿ ಹಲವು ಹಳ್ಳಿಗಳಲ್ಲಿ ಇನ್ನೂ ಸಾರ್ವಜನಿಕ ಸೇವೆ ಲಭ್ಯವಾಗಿಲ್ಲ. ಬೆಳಗ್ಗೆ, ಸಂಜೆ ಬಸ್ ಸೇವೆ ಆವಶ್ಯಕ
ಉಭಯ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಹಾಗೂ ಉದ್ಯೋಗಕ್ಕೆ ಹೋಗುವವರ ಅನುಕೂಲಕ್ಕಾಗಿ ಬೆಳಗ್ಗೆ, ಸಂಜೆ ಎಲ್ಲ ಮಾರ್ಗಗಳಲ್ಲೂ ಹೆಚ್ಚುವರಿ ಬಸ್ ಓಡಿಸಬೇಕು ಎಂಬ ಬೇಡಿಕೆಯಿದೆ.
Related Articles
Advertisement
ಬಸ್‌ಗಳ ಸಂಖ್ಯೆಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಇದರಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 400 ಸಿಟಿ ಬಸ್, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 80 ಸಿಟಿ ಬಸ್ ಸಂಚರಿಸುತ್ತಿವೆ. ಉಳಿದ ಎಲ್ಲವೂ ಸರ್ವಿಸ್ ಬಸ್‌ಗಳಾಗಿವೆ. ನರ್ಮ್ ಬಸ್ ಸೇರಿದಂತೆ ಸುಮಾರು 570ಕ್ಕೂ ಅಧಿಕ ಸರಕಾರಿ ಬಸ್‌ಗಳಿವೆ. ಇದರಲ್ಲಿ ದೂರ ಪ್ರಯಾಣಿಸುವ ಬಸ್‌ಗಳು ಸೇರಿವೆ. ದಕ್ಷಿಣ ಕನ್ನಡದಲ್ಲಿ ಮಂಗಳೂರು ಕೇಂದ್ರಿತವಾಗಿ ಪುತ್ತೂರು, ಸುಳ್ಯ, ಮೂಡುಬಿದಿರೆ, ಧರ್ಮಸ್ಥಳ, ಬಿ.ಸಿ. ರೋಡ್‌ಗೆ ಸಂಚರಿಸುವ ಬಸ್‌ಗಳು ಹೆಚ್ಚಿವೆ. ಹೊಸ ಬಸ್ ಖರೀದಿ
ಸರಕಾರದ ಅನುಮತಿಯಂತೆ ಕೆಎಸ್ಸಾರ್ಟಿಸಿ 300 ಎಲೆಕ್ಟ್ರಿಕಲ್ ಬಸ್ ಹಾಗೂ ಸುಮಾರು 600 ಸಾಮಾನ್ಯ ಬಸ್ ಖರೀದಿ ಪ್ರಕ್ರಿಯೆ ನಡೆಸುತ್ತಿದೆ. ಇದರಲ್ಲಿ ಕೆಲವು ಟೆಂಡರ್ ಹಂತದಲ್ಲಿದ್ದರೆ ಇನ್ನು ಕೆಲವಕ್ಕೆ ಖರೀದಿ ಆದೇಶವಾಗಿದೆ. ಸುಮಾರು 90 ಬಸ್ ಪೂರೈಕೆಯಾಗಿದೆ. ಆದರೆ ಉಭಯ ಜಿಲ್ಲೆಗೆ ಇದರಲ್ಲಿ ಎಷ್ಟು ಬಸ್ ಸಿಗಲಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎನ್ನುತ್ತಾರೆ ಅಧಿಕಾರಿಯೊಬ್ಬರು. ಬಸ್‌ಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇದು ಪೂರ್ಣಗೊಂಡ ಅನಂತರ ಸಾರಿಗೆ ಸೌಲಭ್ಯವಿಲ್ಲದ ಗ್ರಾಮಗಳಿಗೆ ಬೇಡಿಕೆಗೆ ಅನುಸಾರವಾಗಿ ಸೌಲಭ್ಯ ಒದಗಿಸಲು ಕ್ರಮ ತೆಗೆದುಕೊಳ್ಳ ಲಾಗುವುದು.
– ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ ನಿಮ್ಮ ಊರಿಗೆ ಬಸ್ ಉಂಟೇ?
ಲಭ್ಯ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 150ಕ್ಕೂ ಹೆಚ್ಚು ಹಳ್ಳಿಗಳಿಗೆ ಬಸ್ ಸೇವೆ ಇಲ್ಲ. ನಿಮ್ಮ ಊರಿಗೆ ಬಸ್ ಸೇವೆ ಇದೆಯೇ? ಇಲ್ಲದಿದ್ದರೆ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಏನನ್ನು ಅವಲಂಬಿಸಿದ್ದೀರಿ?
ಬಸ್ ವ್ಯವಸ್ಥೆಯನ್ನು ಪಡೆಯಲು ನೀವು ಎಷ್ಟು ದೂರ ಕ್ರಮಿಸಬೇಕು? ನಗರಕ್ಕೆ, ಹತ್ತಿರದ ಪಟ್ಟಣಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದೀರಾ ಎಂಬ ಬಗ್ಗೆ ಮಾಹಿತಿ ಕಳುಹಿಸಿ. ಉದಯವಾಣಿಯು ಇದರ ಕುರಿತು ಅಧ್ಯಯನ ಮಾಡಿ ವರದಿ ಮಾಡಲಿದೆ. ನಿಮ್ಮ ಮಾಹಿತಿಯನ್ನು 6366935315 ಈ ನಂಬರ್‌ಗೆ ಕಳುಹಿಸಿ. ಮಾಹಿತಿ ಕಳುಹಿಸುವವರ ಹೆಸರು, ಹಳ್ಳಿಯ ಹೆಸರು, ತಾಲೂಕಿನ ಹೆಸರು , ಸಂಪರ್ಕ ಸಂಖ್ಯೆ (ಮೊಬೈಲ್)ಯನ್ನು ಕಳುಹಿಸಲು ಮರೆಯಬೇಡಿ. - ರಾಜು ಖಾರ್ವಿ, ಕೊಡೇರಿ